ರಾಮನಗರ, ಫೆ 01: ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಮನೆ ಬಿಟ್ಟು ಹೋಗಿದ್ದ ಪತಿರಾಯ ಆರು ವರ್ಷಗಳ ಬಳಿಕ ಹೆಣ್ಣಾಗಿ ಪತ್ತೆಯಾಗಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ರಾಮನಗರದಲ್ಲಿ ಬಂದಿದೆ. ಈ ಪ್ರಕರಣ ಕೇಳಿ ಎಲ್ಲರಿಗೂ ಶಾಕ್ ಆದರೆ, ಆರು ವರ್ಷಗಳ ಕಾಲ ಗಂಡನಿಗಾಗಿ ಕಾದ ಪತ್ನಿ ಆತನನ್ನು ಹೆಣ್ಣಾಗಿ ನೋಡಿ ಮೂರ್ಛೆ ಹೋಗಿದ್ದಾಳೆ.
ಕಳೆದೊಂದು ದಿನದಿಂದ ಈ ಸುದ್ದಿ ಭಾರೀ ಸದ್ದು ಮಾಡುತ್ತಿದ್ದು, ಸಮೀಪದಲ್ಲೇ ಇದ್ದರೂ ಅರಿವಿಗೆ ಬಾರದ ವ್ಯಕ್ತಿ ಆರು ವರ್ಷಗಳ ಬಳಿಕ ಸಿಕ್ಕಿರುವುದೇ ರೋಚಕ ಕಥೆ. ಇದಕ್ಕೆ ಕನ್ನಡ ಬಿಗ್ ಬಾಸ್ ಸೀಜನ್ 10 ಕಾರಣವಾಗಿದೆ. ಕನ್ನಡ ಬಿಗ್ ಬಾಸ್‌ಗೂ ರಾಮನಗರದಲ್ಲಿ ಕಾಣೆಯಾಗಿದ್ದ ವ್ಯಕ್ತಿ ಪತ್ತೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದರೆ ಈ ಸ್ಟೋರಿ ಸಂಪೂರ್ಣವಾಗಿ ಓದಿ.
ರಾಮನಗರದ ಲಕ್ಷ್ಮಣ ರಾವ್ ಎನ್ನುವಾತ ಚಿಕನ್ ಅಂಡಗಿಯಲ್ಲಿ ಕೆಲಸ ಮಾಡಿಕೊಂಡಿದ್ದ. 2015ರಲ್ಲಿ ಈತನಿಗೆ ಮದುವೆಯಾಗಿದ್ದು, ಲಕ್ಷ್ಮಣ್ ರಾವ್ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಅದೇನಾಯ್ತೋ ಗೊತ್ತಿಲ್ಲ ಲಕ್ಷ್ಮಣ ರಾವ್ ಏಕಾಏಕಿ ನಾಪತ್ತೆಯಾಗಿದ್ದ. ಪತ್ನಿಗೂ ಹೇಳದೇ ರಾತ್ರೋರಾತ್ರಿ ಮನೆ ಬಿಟ್ಟು ಹೋಗಿದ್ದಾನೆ. ಸಾಲ ಭಾದೆ ತಾಳಲಾರದೆ ಲಕ್ಷ್ಮಣ ರಾವ್ ನಾಪತ್ತೆಯಾಗಿದ್ದ ಎನ್ನಲಾಗಿತ್ತು. ಗಂಡ ಕಾಣೆಯಾದ ಹಿನ್ನೆಲೆಯಲ್ಲಿ ಪತ್ನಿ ದೂರು ಕೂಡ ದಾಖಲಿಸಿದ್ದರು. ಆದರೆ ನೋ ಯೂಸ್. ಲಕ್ಷ್ಮಣ ರಾವ್ ಪತ್ತೆಯಾಗಿರಲಿಲ್ಲ.
2017 ಮಾರ್ಚ್ ತಿಂಗಳಲ್ಲಿ ಮನೆ ಬಿಟ್ಟ ಪತಿಗಾಗಿ ಪತ್ನಿ ಇಬ್ಬರು ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಹುಡುಕಾಡಿದ್ದಾಳೆ. ಊರು ಊರು ತಿರುಗಿ, ಜಾತ್ರೆ, ಹಬ್ಬ, ಉತ್ಸವ, ಸಮಾರಂಭ ಯಾವುದೂ ಬಿಡಿದೇ ಪತಿಗಾಗಿ ಹುಡುಕಾಡಿದ್ದಾಳೆ. ಆದರೆ ಪತಿ ಸಿಕ್ಕಿರಲಿಲ್ಲ. ಅಳಿಯ ಕಾಣೆಯಾದ ಹಿನ್ನೆಲೆಯಲ್ಲಿ ಮತ್ತೊಂದು ಮದುವೆ ಆಗುವಂತೆ ತಂದೆ ಹೇಳಿದರೂ, ಆಕೆ ಮಾತ್ರ ಬರೊಬ್ಬರಿ ಆರು ವರ್ಷಗಳು ಕಾದಿದ್ದಾಳೆ. ಆದರೆ ದುರಾದೃಷ್ಟವಶಾತ್ ಗಂಡ ಪತ್ತೆಯಾದರೂ ಆತ ಹೆಣ್ಣಾಗಿರುವುದನ್ನು ನೋಡಿ ಮೂರ್ಛೆ ಹೋಗಿದ್ದಾಳೆ.
ಆರು ವರ್ಷಗಳ ಬಳಿಕ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಲಕ್ಷ್ಮಣ ರಾವ್ ಸುಳಿವು ಸಿಕ್ಕಿದೆ. ಮೈಸೂರಿನಲ್ಲಿ ಬಿಗ್ ಬಾಸ್ ಸ್ಪರ್ಧಿ ನೀತೂ ವನಜಾಕ್ಷಿ ಸ್ವಾಗತ ಸನ್ಮಾನ ಕಾರ್ಯಕ್ರಮದಲ್ಲಿ ಲಕ್ಷ್ಮಣ ರಾವ್ ಹೋಲಿಕೆ ಇರುವ ತೃತೀಯ ಲಿಂಗಿ ಮಹಿಳೆ ಕಾಣಿಸಿಕೊಂಡಿದ್ದಾಳೆ. ರೀಲ್ಸ್‌ನಲ್ಲಿ ಈ ವ್ಯಕ್ತಿಯನ್ನು ನೋಡಿದ ಲಕ್ಷ್ಮಣ್ ಕುಟುಂಬಸ್ಥರು ಐಜೂರು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ರೀಲ್ಸ್ ಶೇರ್ ಮಾಡಿದ ತೃತೀಯ ಲಿಂಗಿ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಆ ವ್ಯಕ್ತಿ ಇರುವ ವಿಳಾಸ ನೀಡಿದ್ದಾಳೆ.
ವಿಳಾಸಕ್ಕೆ ತೆರಳಿದ್ದ ಐಜೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನೀನು ಲಕ್ಷ್ಮಣ್ ರಾವ್ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಾನು ಲಕ್ಷ್ಮಣ್ ರಾವ್ ಅಲ್ಲ, ನಾನು ವಿಜಯಲಕ್ಷ್ಮಿ ಎಂದಿದ್ದಾನೆ. ಆ ವ್ಯಕ್ತಿಯ ಮಾತುಗಳ ಮೇಲಿದ್ದ ಆತ್ಮವಿಶ್ವಾಸ ನೋಡಿ ಈತ ಲಕ್ಷ್ಮಣ್ ರಾವ್ ಅಲ್ಲ ಎಂದು ನಿರ್ಧರಿಸಿ ವಾಪಸ್ ಆಗುವ ವೇಳೆ ಸುಮ್ಮನೆ ಪರೀಕ್ಷಿಸಲು ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮಣ್ ಎಂದು ಕರೆದಿದ್ದಾರೆ. ಲಕ್ಷ್ಮಣ್ ಎಂದು ಕರೆದ ಕೂಡಲೇ ನಾನು ವಿಜಯಲಕ್ಷ್ಮಿ ಎಂದಾತ ಹಾ ಎಂದಿದ್ದಾನೆ. ಕೂಡಲೇ ಆತನೇ ಲಕ್ಷ್ಮಣ್ ರಾವ್ ಎಂದು ನಿರ್ಧರಿಸಿದ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಲಕ್ಷ್ಮಣ್ ರಾವ್ ಪತ್ತೆಯಾದ ಬಗ್ಗೆ ಐಜೂರು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ನಾಪತ್ತೆಯಾಗಿದ್ದ ಪತಿಯನ್ನು ಹೆಣ್ಣಾಗಿ ಕಂಡ ಪತ್ನಿ ಮೂರ್ಛೆ ಹೋಗಿದ್ದು, ಮಗಳ ಬಾಳು ಹಾಳಾಯಿತೆಂದು ತಂದೆ ಠಾಣೆಯಲ್ಲೇ ಕಣ್ಣೀರಿಟ್ಟಿದ್ದಾರೆ. ಆದರೆ ವಿಜಯಲಕ್ಷ್ಮಿ ಆಗಿದ್ದ ಲಕ್ಷ್ಮಣ್ ರಾವ್ ಮಾತ್ರ ನನಗೆ ಈ ಜೀವನ ಇಷ್ಟ ಇದೆ. ಹೆಂಡತಿ ಮಕ್ಕಳು ಬೇಡ ಎಂದು ನೇರವಾಗಿ ಹೇಳಿದ್ದಾನೆ. ಸದ್ಯ ಪೊಲೀಸರು ನಾಪತ್ತೆ ಪ್ರಕರಣವನ್ನು ಬಗೆಹರಿಸಿದ್ದು, ಮುಚ್ಚಳಿಕೆ ಪತ್ರ ಬರೆಸಿಕೊಂಡು ಇಬ್ಬರನ್ನೂ ಕಳುಹಿಸಿಕೊಟ್ಟಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post