ಮಂಗಳೂರು: ನಗರದ ಕೊಡಿಯಾಲ್ ಗುತ್ತಿನಲ್ಲಿ ಮಹಿಳೆಯೊರ್ವರು ತನ್ನ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ.ಕೊಡಿಯಾಲ್ ಬೈಲ್ ಗುತ್ತು ಬಳಿ ಘಟನೆ ಸಂಭವಿಸಿದ್ದು ವಿಜಯ(33) ಮತ್ತು ಶೋಭಿತಾ (4) ಮೃತಪಟ್ಟವರು.
ಮನೆಯಲ್ಲಿ ತಾಯಿ ವಿಜಯ ಜತೆ ಇಬ್ಬರು ಹೆಣ್ಣು ಮಕ್ಕಳು ವಾಸಿಸುತ್ತಿದ್ದು, ಮೂವರು ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟರೆ, ಇನ್ನೊರ್ವ ಮಗಳು ಅದೃಷ್ಟವಶಾತ್ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ , ಮೃತ ವಿಜಯಳ ಮೊದಲ ಪತಿ 6 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಒಂದಷ್ಟು ಸಮಯದ ಬಳಿಕ ಅವರು ಎರಡನೇ ವಿವಾಹವಾಗಿದ್ದರು. ಎರಡನೇ ಪತಿ ಮೂರು ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದು ವಿಜಯ ಅವರಿಗೆ ತೀವ್ರ ಅಘಾತ ಉಂಟು ಮಾಡಿತ್ತು.


ಇದರಿಂದ ತೀವ್ರ ನೊಂದಿದ್ದ ವಿಜಯಾ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು ಇಬ್ಬರು ಮಕ್ಕಳಿಗೂ ನೇಣು ಕುಣಿಕೆ ಹಾಕಿ ತಾನು ಕೂಡ ನೇಣಿಗೆ ಶರಣಾಗಿದ್ದಾಳೆ. ಆದರೆ ಅದೃಷ್ಟವಶಾತ್ 12 ವರ್ಷದ ಯಜ್ಞಾ ಕಾಲ ಬುಡದಲ್ಲಿದ್ದ ಟೀಫಾಯಿ ಆಕೆಯನ್ನು ಬದುಕಿಸಿದೆ. ನೇಣು ಕುಣಿಕೆಯಲ್ಲಿದ್ದರೂ ಜೀವ ರಕ್ಷಣೆಗಾಗಿ ಕೂಗಿದ್ದಾಳೆ. ಆಕೆ ಜೋರಾಗಿ ಕೂಗಿದ್ದು, ಮನೆಯ ಮೇಲಿನ ಮಹಡಿಯಲ್ಲಿ ಬಾಡಿಗೆಗಿದ್ದ ಹೊಟೇಲ್ ಸಿಬ್ಬಂದಿ ಕೆಳಗೆ ಓಡಿ ಬಂದಿದ್ದು ನೋಡಿದಾಗ ತಾಯಿ ವಿಜಯಾ ಮತ್ತು 4 ವರ್ಷದ ಮಗು ಪ್ರಾಣ ಬಿಟ್ಟಿದ್ದರು. ಯಜ್ಞಾಳನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ,ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಧಾವಿಸಿದ್ದು ತನಿಖೆ ಆರಂಭಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post