ಬಂಟ್ವಾಳ : ನಿಗೂಢವಾಗಿ ನಾಪತ್ತೆಯಾಗಿದ್ದ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಎಂಬವರ ಪುತ್ರ, ಪಿಯುಸಿ ವಿದ್ಯಾರ್ಥಿ ದಿಗಂತ್ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಲು ಫರಂಗಿಪೇಟೆ ಜಂಕ್ಷನ್‌ನಲ್ಲಿಂದು ಪ್ರತಿಭಟನೆ ನಡೆಸಲಾಯಿತು. ಕೆಲಕಾಲ ಪೇಟೆ ಬಂದ್ ಮಾಡಿ ಬಾಲಕನ ಪತ್ತೆಗೆ ಒತ್ತಾಯಿಸಲಾಯಿತು. ಈ ವೇಳೆ ಜಾತಿ, ಮತ, ಧರ್ಮದ ಚೌಕಟ್ಟು ಮೀರಿ ಸರ್ವ ಧರ್ಮೀಯರು ಅಂಗಡಿ-ಮಳಿಗೆಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಕುಮಾರ್ ಮಾತನಾಡಿ, “ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಕ್ಲಿಷ್ಟಕರವಾದ ಪ್ರಕರಣಗಳಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಜಿಲ್ಲೆಯ ವಿವಿಧ ಠಾಣೆಯ ನುರಿತ ಪೊಲೀಸರನ್ನು ಕರೆಸಿ ತನಿಖೆ ನಡೆಸುತ್ತಿದ್ದೇವೆ. ದಿಗಂತ್ ಪತ್ತೆಯಾಗುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ. ನಿಮ್ಮಲ್ಲಿ ಮಾಹಿತಿ ಇದ್ದರೆ ನಮ್ಮ ಜೊತೆ ಹಂಚಿಕೊಳ್ಳಿ. ತನಿಖೆ ಮುಂದುವರೆಸಲು ನಿಮ್ಮ ಸಹಕಾರ ಇರಲಿ” ಎಂದರು.
ಸಂಸದ, ಶಾಸಕರ ಭೇಟಿ : ಪ್ರತಿಭಟನಾ ಸ್ಥಳಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಗಾಂಜಾ ಕೇಸ್ಗಳ ವಿರುದ್ಧ ಪೊಲೀಸರು ತನಿಖೆ ಮುಂದುವರಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡರೆ ಇಂತಹ ಘಟನೆಗಳು ಮರುಕಳಿಸಲ್ಲ. ಪೊಲೀಸರು ಸದೃಢ ತನಿಖೆ ನಡೆಸಬೇಕು ಎಂದು ಸೂಚಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಹಿಂದೂ ಸಂಘಟನೆಯವರು ಪ್ರತಿ ಬಾರಿ ರಸ್ತೆಗಿಳಿದು ಪ್ರತಿಭಟನೆ ಮಾಡುವ ರೀತಿ ಮಾಡಬೇಡಿ, ಹಿಂದೂ ಸಮಾಜವನ್ನು ಕೆಣಕುವ ಕೆಲಸ ಮಾಡಬೇಡಿ ಎಂದು ಹೇಳಿ, ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡುವ ಬಗ್ಗೆ ಭರವಸೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಮುಖಂಡರು, ಬಿಜೆಪಿ ನಾಯಕರಿಗೆ ಭದ್ರತೆಯಿಲ್ಲದಂತಾಗಿದೆ. ಪರಂಗಿಪೇಟೆ ಪರಿಸರ ಗಾಂಜಾ ಮಾಫಿಯಾ ಹೆಚ್ಚಾಗಿದೆ. ಈ ಹಿಂದೆಯೂ ಇಲ್ಲಿ ಬಿಜೆಪಿ ಮುಖಂಡನಿಗೆ ಮಾರಣಾಂತಿಕ ಹಲ್ಲೆಯಾಗಿತ್ತು. ಇದೀಗ ಮತ್ತೆ ಬಾಲಕ ನಾಪತ್ತೆಯಾಗಿ ಐದು ದಿನಗಳು ಕಳೆದಿವೆ. ಎರಡು ದಿನಗಳಲ್ಲಿ ಬಾಲಕನ ನಾಪತ್ತೆ ಪ್ರಕರಣ ಭೇಧಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರಸಾದ್ ಕುಮಾರ್ ರೈ, ರವೀಂದ್ರ ಕಂಬಳಿ, ಭರತ್ ಕುಮ್ಡೆಲು, ಉಮೇಶ್ ಶೆಟ್ಟಿ ಬರ್ಕೆ, ತಾರಾನಾಥ ಕೊಟ್ಟಾರಿ ತೇವು, ನಂದನ್ ಮಲ್ಯ, ಮನೋಜ್ ಆಚಾರ್ಯ ಮತ್ತಿತರರ ಜೊತೆ ಫರಂಗಿಪೇಟೆಯ ಸರ್ವಧರ್ಮೀಯ ಮುಖಂಡರೂ ಪ್ರತಿಭಟನೆಗೆ ಬೆಂಬಲ ನೀಡಿದರು.
Discover more from Coastal Times Kannada
Subscribe to get the latest posts sent to your email.
Discussion about this post