ಮಂಗಳೂರು: ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯ ಭಾಗವಾಗಿ 2024ರ ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಖಾಝಿಗಳಾದ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಝೈನುಲ್ ಉಲಮಾ ಮಾಣಿ ಉಸ್ತಾದ್ ಸಹಿತ ಪ್ರಮುಖ ಉಲಮಾಗಳು ಆಗ್ರಹಿಸಿದ್ದಾರೆ.
ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯ ಭಾಗವಾಗಿ 2024ರ ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರ ವಿರೋಧದ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಲಾಗಿತ್ತು. ಆದರೆ ಪ್ರಸ್ತುತ ಸಮಿತಿಯು ವಿರೋಧ ಪಕ್ಷಗಳ ಪ್ರತಿನಿಧಿಗಳು ಸೂಚಿಸಿದ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಮೊದಲಿಗಿಂತಲೂ ಅಪಾಯಕಾರಿ ಅಂಶಗಳನ್ನು ಸೇರಿಸಿ ಮಂಡಿಸಿದೆ. ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಲ್ಲಿ ಅಸುರಕ್ಷತೆಯನ್ನು ಮೂಡಿಸುವ ಮತ್ತು ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿರುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ಈ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಕೂಡಲೇ ಹಿಂದೆಗೆಬೇಕು.
ವಕ್ಫ್ ಎಂಬುದು ದೇವರ ಹೆಸರಿನಲ್ಲಿ ಸಮರ್ಪಿಸಲಾದ ದಾನವಾಗಿದ್ದು, ಯಾರಿಗೂ ಯಾವತ್ತೂ ಪರಭಾರೆ ಮಾಡಲಾಗದ, ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಗೆ ಮಾತ್ರ ಬಳಸಬಹುದಾದ ಸೊತ್ತು. ಇವುಗಳ ನಿರ್ವಹಣೆಗೆ 1913 ರಲ್ಲಿ ವಕ್ಫ್ ಕಾಯಿದೆಯನ್ನು ರೂಪಿಸಲಾಗಿತ್ತು. 1955ರಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ವಕ್ಫ್ ಬೋರ್ಡ್ ಅನ್ನು ಅಂಗೀಕರಿಸಿ, 1995 ರಲ್ಲಿ ಹಾಗೂ 2013 ರಲ್ಲಿ ಅಗತ್ಯ ತಿದ್ದುಪಡಿಗಳನ್ನು ತಂದು ವಕ್ಫ್ ಸ್ವತ್ತುಗಳನ್ನು ಸಂರಕ್ಷಿಸಲು ಪ್ರಯತ್ನಿಸಲಾಗಿತ್ತು.
ಭಾರತದ ಸಂವಿಧಾನದಲ್ಲಿ ಆರ್ಟಿಕಲ್ 25, 26, 27 ಮತ್ತು 28 ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದಿದ್ದು, ಆರ್ಟಿಕಲ್ 26 ರ ಎ,ಬಿ,ಸಿ,ಡಿ ಕಲಮುಗಳು ಧಾರ್ಮಿಕ ಆಚರಣೆಯ ಭಾಗವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸಂಸ್ಥೆಗಳನ್ನು ಕಟ್ಟಿಕೊಳ್ಳುವ, ಧಾರ್ಮಿಕ ವಿಷಯದಲ್ಲಿ ಅದನ್ನು ತಮ್ಮ ಧರ್ಮಾನುಸಾರ ಪಾಲನೆಮಾಡುವ, ಸ್ಥಿರ ಹಾಗೂ ಚರಾಸ್ತಿಗಳನ್ನು ಹೊಂದುವ ಮತ್ತು ಅವನ್ನು ಕಾನೂನು ರೀತ್ಯ ನಿರ್ವಹಣೆ ಮಾಡುವ ಹಕ್ಕನ್ನು ಕೊಡುತ್ತದೆ. ಇದರಂತೆ ಹಿಂದೂ, ಮುಸ್ಲಿಂ, ಕ್ರೈಸ್ತ , ಸಿಖ್ ಸೇರಿದಂತೆ ಎಲ್ಲ ಧರ್ಮೀಯರು ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿಕೊಂಡು ದೇಣಿಗೆಗಳನ್ನು ಸ್ವೀಕರಿಸುತ್ತಿದ್ದು, ಮುಸ್ಲಿಂ ಸಮುದಾಯದ ಧಾರ್ಮಿಕ ದಾನಗಳ ಆಚಾರಗಳನ್ನು ಮುನ್ನಡೆಸಲು ವಕ್ಫ್ ಬೋರ್ಡ್ ಕಾಯಿದೆಯನ್ನು ರೂಪಿಸಲಾಗಿದೆ.
ಇದೀಗ ಕೇಂದ್ರದ ಬಿಜೆಪಿ ಸರ್ಕಾರವು ವಕ್ಫ್ ಕಾಯಿದೆಗೆ ಅಮೂಲಾಗ್ರ ತಿದ್ದುಪಡಿ ಮಾಡಲು ಮುದಾಗಿದ್ದು. ಅದಕ್ಕಾಗಿ United Wakf -Management, Empowerment, Efficiency, Development- Act- UMEED- ಮಸೂದೆಯನ್ನು ಜಾರಿಗೆ ತರುತ್ತಿದೆ.
ಈ ತಿದ್ದುಪಡಿಗಳು ವಕ್ಫ್ ಆಸ್ತಿಗಳನ್ನು ಕಬಳಿಸುವ ಮತ್ತು ಅಳಿದುಳಿದ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲೂ ಸಮುದಾಯದ ನಿಯಂತ್ರಣವನ್ನು ತಪ್ಪಿಸುವ ಉದ್ದೇಶವನ್ನೇ ಹೊಂದಿದೆ.
ಬಹುತೇಕ ವಕ್ಫ್ ಆಸ್ತಿಗಳಿಗೆ ನೂರಾರು ವರ್ಷಗಳ ಇತಿಹಾಸವಿದ್ದು, ಹೆಚ್ಚಿನವು ಮೌಖಿಕ ಒಡಂಬಡಿಕೆಯ ಮೂಲಕ ನೀಡಲಾಗಿದೆ. ನೂತನ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಆರು ತಿಂಗಳೊಳಗೆ ಕಾಗದ ಪತ್ರ ತೋರಿಸಿ ದಾಖಲಾಗದ ಯಾವುದೇ ವಕ್ಫ್ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ. ಈವರೆಗೆ ವಕ್ಫ್ ಆಸ್ತಿಯನ್ನು ನಿಗದಿ ಪಡಿಸಲು ಸರ್ಕಾರವು ಇಸ್ಲಾಮಿಕ್ ಕಾನೂನು ಮತ್ತು ವಕ್ಫ್ ವಿಷಯಗಳಲ್ಲಿ ಪರಿಣಿತಿ ಇರುವ ಒಬ್ಬ ಸ್ವಾಯತ್ತ ಸರ್ವೆಯರ್ ಅನ್ನು ನೇಮಿಸುತ್ತಿತ್ತು. ಆದರೆ ನೂತನ ತಿದ್ದುಪಡಿ ಪ್ರಕಾರ ಆ ಎಲ್ಲಾ ಜವಾಬ್ದಾರಿಗಳನ್ನು ಒಬ್ಬ ಜಿಲಾಧಿಕಾರಿಗೆ ನೀಡಲಾಗಿದೆ.
ವಕ್ಫ್ ತಗಾದೆಗಳನ್ನು ಇತ್ಯರ್ಥ ಮಾಡುವ ವಕ್ಫ್ ಟ್ರಿಬ್ಯುನಲ್‌ಗೆ ನೇಮಕವಾಗುವ ಸರ್ಕಾರಿ ಅಧಿಕಾರಿ ಮುಸ್ಲಿಮನಾಗಿರಬೇಕೆಂಬ ಷರತ್ತನ್ನೂ ಹೊಸ ಮಸೂದೆ ತೆಗೆದು ಹಾಕಿದೆ. ಅಲ್ಲದೆ ವಕ್ಫ್ ಬೋರ್ಡಿನಲ್ಲಿ ಕಡ್ಡಾಯವಾಗಿ ಇಬ್ಬರು ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಿಸಲಾಗಿದೆ. ಹಿಂದೂ ಅಥವಾ ಸಿಖ್ ದೇವಸ್ಥಾನಗಳ ನೇಮಕವಾಗುವ ಸರ್ಕಾರಿ ಅಧಿಕಾರಿಯು ಆಯಾ ಧರ್ಮೀಯರೇ ಅಗಿರಬೇಕೆಂಬ ಕಾನೂನು ಜಾರಿಯಲ್ಲಿದ್ದು, ವಕ್ಫ್ ನಿಂದ ಮಾತ್ರ ಈ ಕಾನೂನನ್ನು ಕೈ ಬಿಡುವ ಉದ್ದೇಶವೇನು? ಹೀಗೆ ತಿದ್ದುಪಡಿ ಮಸೂದೆಯು ಹಲವಾರು ಅನ್ಯಾಯಕಾರಿ ಅಂಶಗಳನ್ನು ಒಳಗೊಂಡಿದ್ದು, ಮುಸ್ಲಿಮರನ್ನು ದಮನಿಸುವ ಕೋಮುವಾದಿ ಉದ್ದೇಶವನ್ನಷ್ಟೇ ಹೊಂದಿದೆ.
ಜಂಟಿ ಸಂಸದೀಯ ಸಮಿತಿಯ ಮುಂದೆ 98 ಲಕ್ಷದಷ್ಜು ಲಿಖಿತ ಮನವಿಗಳು ಬಂದಿದ್ದು, ಅದರಲ್ಲಿ ಬಹುಪಾಲು ಈ ತಿದ್ದುಪಡಿಗಳನ್ನು ವಿರೋಧಿಸುವುವೇ ಆಗಿತ್ತು. ಆದಾಗ್ಯೂ ಸರ್ಕಾರವು ವಿರೋಧ ಪಕ್ಷಗಳು ಸಲ್ಲಿಸಿದ್ದ ಆಕ್ಷೇಪಣೆಗಳನ್ನೂ ಅವಗಣಿಸಿ, ಸರ್ವಾಧಿಕಾರಿ ಪ್ರವೃತ್ತಿ ತೋರಿ ಮಸೂದೆಯನ್ನು ಉಭಯ ಸದನಗಳಲ್ಲಿ ಮಂಡಿಸಿದೆ. ಈ ತಿದ್ದುಪಡಿಯು ವಕ್ಫ್ ಆಸ್ತಿಗಳನ್ನು ಸರ್ಕಾರ ಒತ್ತುವರಿ ಮಾಡುವ ಮತ್ತು ವಕ್ಫಿನ ಇಸ್ಲಾಮಿಕ್ ಧಾರ್ಮಿಕತೆಯನ್ನು ನಾಶಮಾಡುವ ದುರುದ್ದೇಶ ಪೂರಿತ ನಡೆಯಾಗಿದ್ದು, ಮುಸ್ಲಿಮರ ಅಸ್ತಿತ್ವ ಮತ್ತು ಅಸ್ಮಿತೆಯನ್ನು ನಾಶ ಮಾಡುವ ಉಗ್ರ ಕೋಮುವಾದಿತ್ವದ ಭಾಗವಾಗಿದೆ. ದೇಶದ ಅಲ್ಪಸಂಖ್ಯಾತ ಸಮಾಜಕ್ಕೆ ಸಂರಕ್ಷಣೆ ಒದಗಿಸುವುದು ಯಾವುದೇ ಸರ್ಕಾರದ ಜವಾಬ್ದಾರಿಯಾಗಿದ್ದು, ಅವರಿಗೆ ಸಂವಿಧಾನದಲ್ಲಿ ನೀಡಲಾಗಿರುವ ಧಾರ್ಮಿಕ ಹಕ್ಕಿನ ಮೇಲಿನ ದಾಳಿಯು ಸಂವಿಧಾನದ ಮೇಲಿನ ದಾಳಿಯೇ ಆಗಿದೆ. ಆದ್ದರಿಂದ ಸರ್ಕಾರವು ಪ್ರಸ್ತಾವಿತ ಮಸೂದೆಯನ್ನು ಹಿಂದೆಗೆಯಲೇ ಬೇಕು.
ದೇಶದ ಸಂವಿಧಾನ, ಜಾತ್ಯತೀತ ಸಿದ್ಧಾಂತ ಮತ್ತು ಬಹುತ್ವ ಸಂಸ್ಕೃತಿಯಲ್ಲಿ ನಂಬಿಕೆ ಇರುವ ಎಲ್ಲ ಪ್ರಜ್ಞಾವಂತ ಭಾರತೀಯರು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಧ್ವನಿ ಎತ್ತಬೇಕು.
ಸುದ್ದಿಗೋಷ್ಠಿಯಲ್ಲಿ ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ, ಉಸ್ಮಾನುಲ್ ಫೈಝಿ ತೋಡಾರು, ಯು.ಕೆ.ಮುಹಮ್ಮದ್ ಸಅದಿ ವಳವೂರು, ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್, ಅನೀಸ್ ಕೌಸರಿ, ಉಮರ್ ದಾರಿಮಿ ಸಾಲ್ಮರ, ಖಾಸಿಂ ದಾರಿಮಿ ಸವಣೂರು, ಎಂ.ವೈ. ಅಬ್ದುಲ್ ಹಫೀಳ್ ಸಅದಿ ಕೊಡಗು, ಅಬೂಬಕರ್ ಸಿದ್ದೀಕ್ ದಾರಿಮಿ ಕಡಬ, ಕೆಕೆಎಂ ಕಾಮಿಲ್ ಸಖಾಫಿ ಸುರಿಬೈಲ್, ರಫೀಕ್ ಹುದವಿ ಕೋಲಾರ, ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಹುಸೈನ್ ದಾರಿಮಿ ರೆಂಜಲಾಡಿ, ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರು, ಅಬೂ ಸಾಲಿಹ್ ಫೈಝಿ ತುಂಬೆ, ಮುಹಮ್ಮದ್ ಅಲಿ ತುರ್ಕಲಿಕೆ, ಮುಹಮ್ಮದ್ ಮುಸ್ಲಿಯಾರ್ ಮುಂಡೋಲ, ಅಶ್ರಫ್ ಕಿನಾರ ಮಂಗಳೂರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post