ಮಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರು ಕ್ಷೇತ್ರ ಪುತ್ತೂರು. ಕ್ಷೇತ್ರದಲ್ಲಿ ನಡೆದ 15 ವಿಧಾನಸಭಾ ಚುನಾವಣೆಗಳ ಪೈಕಿ ಎಂಟು ಬಾರಿ ಕಾಂಗ್ರೆಸ್, ಗೆದ್ದರೆ ಆರು ಬಾರಿ ಬಿಜೆಪಿ ಗೆದ್ದಿದೆ. ಪ್ರತಿ ಬಾರಿ ನಡೆಯುತ್ತಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟದ ಕಣಕ್ಕೆ ಈ ಬಾರಿ ಹಿಂದುತ್ವ ತಂಡ ಎಂಟ್ರಿ ಕೊಟ್ಟಿದೆ. ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಕಾರ್ಯಕರ್ತರ ಅಪೇಕ್ಷೆಯ ಮೇರೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ವಿರುದ್ಧ ಬಂಡಾಯವಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿರುವುದು ಪುತ್ತೂರಿನ ಹೋರಾಟದ ಕಣದ ಚಿತ್ರಣವನ್ನೇ ಬದಲಿಸಿದೆ.
ಹಿಂದೂ ಸಂಘಟನೆಗಳ ಕಾರ್ಯಕರ್ತರ ನಾಯಕನಾಗಿ ಅರುಣ್ ಕುಮಾರ್ ಪುತ್ತಿಲ, ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಬಿಜೆಪಿ ಕೂಡ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಿದ್ದು, ಬಿಜೆಪಿ ಜಾತಿ ಲೆಕ್ಕಾಚಾರದಲ್ಲಿ ತಂತ್ರ ಹೂಡಿದೆ. ಕಾಂಗ್ರೆಸ್‌ನಿಂದ ಅಶೋಕ್ ಕುಮಾರ್ ರೈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದು, ಪುತ್ತೂರಿನ ಚುನಾವಣಾ ಕಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಹಿಂದುತ್ವ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆಯಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಗಿದೆ. 2008ರ ಬಳಿಕ ಪುತ್ತೂರಿನ ಚುನಾವಣಾ ಕದನ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 2008ರಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೇ ಪ್ರಸ್ತುತ ಕಾಂಗ್ರೆಸ್ ನಾಯಕಿ ಶಕುಂತಲಾ ಶೆಟ್ಟಿ ಆಗ ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಬಿಜೆಪಿ ಅಲ್ಪ ಮತದ ಅಂತರದಲ್ಲಿ ಜಯಗಳಿಸಿತ್ತು. ಒಟ್ಟಾರೆ ಈವರೆಗೂ ಬಿಜೆಪಿ ಭದ್ರಕೋಟೆಯಾಗಿದ್ದ ಹಿಂದುತ್ವದ ಪ್ರಯೋಗ ಶಾಲೆ ಪುತ್ತೂರಿನಲ್ಲಿ ಬಂಡಾಯ ಅಭ್ಯರ್ಥಿ ಸ್ಪರ್ಧೆ ಈ ಬಾರಿಯ ಚುನಾವಣಾ ಕಣದ ರಂಗನ್ನು ಮತ್ತಷ್ಟು ಹೆಚ್ಚಿಸಿದೆ.

ಪುತ್ತೂರಿನ ಹಾಲಿ ಶಾಸಕ ಸಂಜೀವ ಮಠಂದೂರುಗೆ ಈ ಬಾರಿ ಟಿಕೆಟ್ ಕೈ ತಪ್ಪಿದ್ದು, ಆಡಳಿತ ವಿರೋಧಿ ಅಲೆಯನ್ನು ತಪ್ಪಿಸಲು ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಆಶಾ ತಿಮ್ಮಪ್ಪ ಗೌಡ ಅವರು ಮೂಲತಃ ಸುಳ್ಯ ವಿಧಾನಸಭಾ ಕ್ಷೇತ್ರದ ನಿವಾಸಿಯಾಗಿದ್ದು ಅಭ್ಯರ್ಥಿ ಆಯ್ಕೆಗೆ ಸ್ವಪಕ್ಷೀಯರಲ್ಲೇ ಅಸಮಾಧಾನ ತಂದಿದೆ. ಈ ಹಿನ್ನಲೆಯಲ್ಲಿ ನೂರಾರು ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ಅವರನ್ನು ಸ್ಪರ್ಧೆಗಳಿಸಿ, ಅವರ ಪರ ನಿಂತಿರುವುದು ಬಿಜೆಪಿಗೆ ತಲೆ ನೋವಾಗಿದೆ.
ಈಗಾಗಲೇ ಕ್ಷೇತ್ರದಲ್ಲಿರುವ ಆಡಳಿತ ವಿರೋಧಿ ಅಲೆಯಿಂದ ಕ್ಷೇತ್ರ ಕೈತಪ್ಪುವ ಭೀತಿ ಬಿಜೆಪಿಗಿದೆ. ಹೀಗಾಗಿ ಹಿಂದುತ್ವದ ಶಕ್ತಿ ಕೇಂದ್ರ ಪುತ್ತೂರನ್ನು ಉಳಿಸಲು ಆರ್‌ಎಸ್‌ಎಸ್ ಮುಖಂಡರು ನೇರವಾಗಿ ಮತ ಕ್ಷೇತ್ರಕ್ಕೆ ಇಳಿದಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಮನವೊಲಿಸುವಲ್ಲಿ ವಿಫಲರಾಗಿರುವ ಬಿಜೆಪಿ ಮುಖಂಡರು ಹಾಗೂ ಆರ್‌ಎಸ್‌ಎಸ್ ಮುಖಂಡರು ಕ್ಷೇತ್ರದಲ್ಲಿ ಆಶಾ ತಿಮ್ಮಪ್ಪ ಗೌಡ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿ ಭದ್ರಕೋಟೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿರುಕು ಮೂಡಿದ್ದು, ಬಿಜೆಪಿ ಧೋರಣೆ ಬಗ್ಗೆ ಸಿಡಿದೆದ್ದ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಮುಖಂಡರ ಮಾತಿಗೆ ಬಗ್ಗದೇ ನಾಮಪತ್ರ ಸಲ್ಲಿಸಿ ಚುನಾವಣಾ ಕಣಕ್ಕಿಳಿದರು. ಸಂಘ ಪರಿವಾರದ ಪ್ರಭಾವಿ ಮುಖಂಡರಾಗಿರುವ ಅರುಣ್ ಕುಮಾರ್ ಪುತ್ತಿಲ ನಾಮಪತ್ರ ಸಲ್ಲಿಕೆ ವೇಳೆ ಹದಿನೈದು ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಶಕ್ತಿ ಪ್ರದರ್ಶನದ ಬಳಿಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದಂತಾಗಿದೆ. ಅರುಣ್ ಕುಮಾರ್ ಪುತ್ತಿಲ ಕೂಡ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಪುತ್ತೂರಿನಲ್ಲಿ ಬಿಜೆಪಿ ವಸರ್ಸ್ ಅರುಣ್ ಕುಮಾರ್ ಪುತ್ತಿಲ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ.

ಇನ್ನೊಂದು ಕಡೆ ಕಾಂಗ್ರೆಸ್ ಈ ಬಾರಿ ಹೊಸ ಮುಖ ಅಶೋಕ್ ಕುಮಾರ್ ರೈಗೆ ಟಿಕೆಟ್ ನೀಡಿದೆ. ಮೂಲತಃ ಬಿಜೆಪಿಯವರೇ ಆದ ಅಶೋಕ್ ಕುಮಾರ್ ರೈ ಕ್ಷೇತ್ರದಲ್ಲಿ ಸಮಾಜ ಸೇವೆಯಿಂದಲೇ ಹೆಸರುಗಳಿಸಿದ್ದು, ಈವರೆಗೆ ಸುಮಾರು 22 ಸಾವಿರ ಜನರಿಗೆ ನೆರವಾಗಿದ್ದಾರೆ. ಹೀಗಾಗಿ ಅವರೆಲ್ಲರ ಮತ ಅಶೋಕ್ ಕುಮಾರ್ ಅವರ ಮತ ಬ್ಯಾಂಕ್‌ನಲ್ಲಿದ್ದು, ಕಾಂಗ್ರೆಸ್ ಕ್ಷೇತ್ರದಲ್ಲಿ ಸುಲಭ ಜಯಗಳಿಸುವ ವಿಶ್ವಾಸದಲ್ಲಿ ಕಾಂಗ್ರೆಸ್ಸಿಗರು ಇದ್ದಾರೆ. ಇನ್ನೊಂದು ಕಡೆ ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ನಡುವಿನ ಸ್ಪರ್ಧೆಯಿಂದ ಬಿಜೆಪಿ ಮತಗಳು ವಿಭಜನೆಯಾಗಲಿದ್ದು, ಇದರಿಂದ ಕಾಂಗ್ರೆಸ್‌ಗೆ ಲಾಭವಾಗುವ ರಾಜಕೀಯ ಲೆಕ್ಕಾಚಾರಗಳು ಪುತ್ತೂರಲ್ಲಿ ನಡೆಯುತ್ತಿದೆ
Discover more from Coastal Times Kannada
Subscribe to get the latest posts sent to your email.








Discussion about this post