ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮೂರು ಹತ್ಯೆಗಳ ನೈಜ ಆರೋಪಿಗಳನ್ನು ಆಗಸ್ಟ್ 5ರೊಳಗೆ ಬಂಧಿಸದಿದ್ದರೆ ಮಂಗಳೂರಿಗೆ ಬಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಡೆಡ್ಲೈನ್ ಕೊಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಸಾವಿಗೀಡಾದ ಮಸೂದ್, ಪ್ರವೀಣ್ ನೆಟ್ಟಾರು, ಫಾಝಿಲ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ಮೂವರು ಯುವಕರ ಮನೆಗೆ ಭೇಟಿ ನೀಡಿದ ಬಳಿಕ ಮನಸ್ಸು ನೊಂದಿದೆ. ಈ ಮೂರು ಪ್ರಕರಣಗಳ ಆರೋಪಿಗಳ ಬಂಧನವಾಗಬೇಕು. ಆ. 5 ರೊಳಗೆ ನೈಜ ಆರೋಪಿಗಳನ್ನು ಬಂಧಿಸುವಂತೆ ಗಡುವು ನೀಡುತ್ತಿದ್ದೇನೆ. ಒಂದು ವೇಳೆ ಅಷ್ಟರೊಳಗೆ ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡಸುತ್ತೇನೆ ಎಂದರು.
ನಾನು ಮಾಡುವ ಸತ್ಯಾಗ್ರಹ ಜನರ ಬದುಕಿಗಾಗಿ. ಈ ಸತ್ಯಾಗ್ರಹದಲ್ಲಿ ಬಜರಂಗದಳದವರು ಸೇರಿದಂತೆ ಎಲ್ಲರೂ ಕೈಜೋಡಿಸಲಿ ಎಂದು ವಿನಂತಿಸುತ್ತಿದ್ದೇನೆ. ನಾನು ಇದನ್ನು ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಪಕ್ಷದಿಂದ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗಳಿಲ್ಲ. ಚುನಾವಣಾ ದೃಷ್ಟಿಯಿಂದ ಮಾಡದೆ ಜನರ ನೆಮ್ಮದಿಗಾಗಿ ಇದನ್ನು ಮಾಡುತ್ತಿದ್ದೇನೆ. ಆಗಸ್ಟ್ 6ಕ್ಕೆ ಸತ್ಯಾಗ್ರಹ ನಡೆಸಲು ನಾನು ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post