ಮಣಿಪಾಲ: ಮಣಿಪಾಲದ ಪೈ ಕುಟುಂಬದ ಹಿರಿಯರಾದ, ‘ಉದಯವಾಣಿ’ ಸಂಸ್ಥಾಪಕ, ವಿವಿಧ ಸಂಘಸಂಸ್ಥೆಗಳಲ್ಲಿ ತೆರೆಮರೆಯಲ್ಲಿದ್ದು ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿದ್ದ ತೋನ್ಸೆ ಮೋಹನದಾಸ್ ಪೈ (89) ಅಸೌಖ್ಯದಿಂದ ಜು. 31ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಆಸ್ಪತ್ರೆಯಲ್ಲಿ ಇತ್ತೀಚಿಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಪೈಯವರು ಆಡಳಿತ ಮತ್ತು ಹಣಕಾಸು ಯೋಜನೆಯ ಜವಾಬ್ದಾರಿಯನ್ನು ನೋಡಿಕೊಂಡಿದ್ದರೆ ಟಿ.ಸತೀಶ್ ಪೈಯವರು ಉತ್ಪಾದನೆಯ ಜವಾಬ್ದಾರಿಯನ್ನು ನೋಡಿಕೊಂಡಿರುತ್ತಿದ್ದರು. ಹೊಸ ರೀತಿ ಆಟೋಮೆಟಿಕ್ ಟೈಪ್ ಸೆಟ್ಟಿಂಗ್ ಮೆಶಿನ್ ಮತ್ತು ಮುದ್ರಣ ಯಂತ್ರವನ್ನು ಗುಣಮಟ್ಟದ ಮುದ್ರಣಕ್ಕಾಗಿ ಹೊರದೇಶದಿಂದ ತರಿಸಲಾಯಿತು. 1961ರಲ್ಲಿ ಪುಸ್ತಕದ ಗುಣಮಟ್ಟದ ಮುದ್ರಣಕ್ಕಾಗಿ ಪ್ರೆಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರ ಬಳಿಕ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮಣಿಪಾಲ್ ಪ್ರೆಸ್‌ಗೆ ಬಂದವು. ಅತ್ಯಾಧುನಿಕ ಆಫ್‌ಸೆಟ್ ಮೆಶಿನ್, ಫೋಟೋ ಕಂಪೋಸಿಂಗ್‌ನೊಂದಿಗೆ ಮುದ್ರಣ ಕ್ಷೇತ್ರದಲ್ಲಿ ದಾಪುಗಾಲು ಇರಿಸಿರುವುದರಲ್ಲಿ ಮೋಹನದಾಸ್ ಪೈಯವರ ಅಪಾರ ಕೊಡುಗೆ ಇದೆ. ಈ ಮೂಲಕ ಮಣಿಪಾಲ ಪ್ರೆಸ್ ದೇಶಮಟ್ಟದ ಮಾನ್ಯತೆಯನ್ನು ಪಡೆಯಿತು. ಮೈಸೂರು, ಕರ್ನಾಟಕ ವಿ.ವಿ.ಗಳ ಮತ್ತು ವಿವಿಧ ಪ್ರಕಾಶನ ಸಂಸ್ಥೆಗಳ ಪಠ್ಯ, ಪುಸ್ತಕಗಳನ್ನು ಮುದ್ರಿಸಿದ ಕೀರ್ತಿಯು ಈಗಲೂ ಮುನ್ನಡೆಯುತ್ತಿದೆ.
1970ರಲ್ಲಿ ಪೈಯವರ ಮುಂದಾಳತ್ವದಲ್ಲಿ ‘ಉದಯವಾಣಿ’ ದಿನ ಪತ್ರಿಕೆ ಆರಂಭವಾಗಿ ಅಲ್ಪಾವಧಿಯಲ್ಲಿಯೇ ಜನಪ್ರಿಯಗೊಂಡಿತು. ಮೋಹನದಾಸ್ ಪೈಯವರು ಆಡಳಿತ ನಿರ್ದೇಶಕರಾಗಿ, ಸತೀಶ್ ಪೈಯವರು ಜಂಟಿ ಆಡಳಿತ ನಿರ್ದೇಶಕರಾಗಿರುವ ಮಣಿಪಾಲ್ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್ ಲಿ.ನಿಂದ ಉದಯವಾಣಿ ಆರಂಭಗೊಂಡಿತು. ವೆಬ್ ಆಫ್‌ಸೆಟ್ ಯಂತ್ರದಿಂದ ಮುದ್ರಣ ಕಾರ್ಯ ಆರಂಭಮಾಡಿದ ಅತಿ ಹಿರಿಯ ದಿನ ಪತ್ರಿಕೆಗಳಲ್ಲಿ ಉದಯವಾಣಿಯೂ ಒಂದು. ಪೈಯವರ ಸಮರ್ಥ ನಾಯಕತ್ವದಲ್ಲಿ ‘ಉದಯವಾಣಿ’ಯು ಗುಣಮಟ್ಟದ ಮುದ್ರಣಕ್ಕಾಗಿ ಹಲವು ವರ್ಷ ನಿರಂತರವಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿತು.
1983ರಲ್ಲಿ ಆರಂಭಗೊಂಡ ‘ತರಂಗ’ ವಾರಪತ್ರಿಕೆಯೂ ಮೋಹನದಾಸ್ ಪೈಯವರ ಕನಸಿನ ಕೂಸು. ಆಧುನಿಕ ಮಣಿಪಾಲದ ಶಿಲ್ಪಿ ಡಾಟಿ.ಎಂ.ಎ.ಪೈಯವರ ಹೆಸರು ಹೊತ್ತ ಡಾಟಿಎಂಎ ಪೈ ಪ್ರತಿಷ್ಠಾನ, ಡಾ. ಟಿಎಂಎ ಪೈಯವರು ಸ್ಥಾಪಿಸಿದ ಮೊದಲ ಕಾಲೇಜು ಶಿಕ್ಷಣ ಸಂಸ್ಥೆ ಎಂಜಿಎಂ ಕಾಲೇಜಿನ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ನ ಪೂರ್ವ ರೂಪ ಐಸಿಡಿಎಸ್ ಲಿ., ‘ಉದಯವಾಣಿ’ಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಮೊದಲಾದ ಸಂಸ್ಥೆಗಳ ಅಧ್ಯಕ್ಷರಾಗಿ ಹೀಗೆ ಹಲವು ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದವರು.
Discover more from Coastal Times Kannada
Subscribe to get the latest posts sent to your email.
Discussion about this post