ಬೆಂಗಳೂರು ಜು.31: ಟ್ಯೂಷನ್‌ಗೆ ತೆರಳಿದ್ದ 12 ವರ್ಷದ ಬಾಲಕನನ್ನು 5 ಲಕ್ಷ ರೂಪಾಯಿ ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದ ಕಿಡ್ನಾಪರ್‌ಗಳು ಬಾಲಕನನ್ನು ಕೊಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಅರಕೆರೆ ಶಾಂತಿನಿಕೇತನ ಲೇಔಟ್ನಿಂದ ನಿಶ್ಚಿತ್ನನ್ನು (12) ಅಪಹರಿಸಲಾಗಿದ್ದು, ಐದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದ್ರೆ, ಬಾಲಕನ ತಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ಅಪಹರಣಕಾರರು ಬಾಲಕನನ್ನು ಕೊಂದು ಬಳಿಕ ಸುಟ್ಟು ಹಾಕಿದ್ದಾರೆ.
ಅರಕೆರೆ ಪ್ರದೇಶದ ಶಾಂತಿನಿಕೇತನ ಬಡಾವಣೆಯಲ್ಲಿ ನೆಲೆಸಿರುವ ಕಾಲೇಜು ಪ್ರೊಫೆಸರ್ ಕುಟುಂಬದ 7 ತರಗತಿಯ ವಿದ್ಯಾರ್ಥಿ ನಿಶ್ಚಿತ್ ಎಂಬಾತನು ನಿನ್ನೆ (ಜುಲೈ 30) ರಾತ್ರಿ ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಅಪಹರಿಸಿದ್ದಾರೆ. ನಿಶ್ಚಿತ್ ಕಿಡ್ನಾಪ್ ಆಗುತ್ತಿದ್ದಂತೆ, ಕೆಲವೇ ಹೊತ್ತಿನಲ್ಲಿ ಪೋಷಕರಿಗೆ ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಿದೆ. ಆಗ ಕಿಡ್ನಾಪರ್ಸ್ ನಿಮಗೆ ನಿಮ್ಮ ಮಗ ಬೇಕಿದ್ದರೆ ಕೂಡಲೇ 5 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಬರುವಂತೆ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಪೊಲೀಸರಿಗೆ ಮಾಹಿತಿ ನೀಡದಂತೆಯೂ ಬೆದರಿಕೆ ಹಾಕಿದ್ದಾರೆ. ಆದರೆ, ಕಾಲೇಜು ಪ್ರೊಫೆಸರ್ ತನ್ನ ಮಗನನ್ನು ಉಳಿಸಿಕೊಡುವಂತೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆಯೇ ಹುಳಿಮಾವು ಪೊಲೀಸರು ಸಿಸಿಟಿವಿ ಫುಟೇಜ್, ಮೊಬೈಲ್ ಲೊಕೇಶನ್ ಟ್ಯ್ರಾಕಿಂಗ್ ಮೂಲಕ ತನಿಖೆಗೆ ಚುರುಕುಗೊಳಿಸಿದ್ದರು. ಬಾಲಕನನ್ನು ಹುಡುಕುವುದಕ್ಕೆ, ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಇತ್ತ ಬಾಲಕನ ಪೋಷಕರು 5 ಲಕ್ಷ ರೂ. ಹಣವನ್ನು ಸಿದ್ಧಪಡಿಸಿ ಕಿಡ್ನಾಪರ್ಸ್‌ಗೆ ಕೊಟ್ಟು ಮಗನನ್ನು ಕರೆದುಕೊಂಡು ಬರಲು ಸಿದ್ಧವಾಗಿದ್ದರು. ಕಿಡ್ನಾಪ್ ಮಾಡಿದ್ದ ಬಗ್ಗೆ ದೂರು ಕೊಟ್ಟ ವಿಚಾರ ಅಪಹರಣಕಾರರಿಗೆತಿಳಿದ ಕೂಡಲೇ ಸಿಕ್ಕಿಬೀಳುವ ಭಯದಿಂದ ಬಾಲಕನನ್ನು ಕೈಕಟ್ಟಿ ಥಳಿಸಿ ಕೊಲೆ ಮಾಡಿದ್ದಾರೆ. ಬಳಿಕ ರಸ್ತೆ ಬದಿಯ ಕಲ್ಲು ಬಂಡೆಯ ಮೇಲೆ ಅಲ್ಪಸ್ವಲ್ಪ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ.
ಪೊಲೀಸರು ಕಿಡ್ನಾಪರ್ಸ್‌ಗಳ ಫೋನ್ ಟ್ರೇಸ್ ಮಾಡುತ್ತಾ ಲೊಕೇಷನ್ ಗೆ ಹೋದ ವೇಳೆ ಬನ್ನೇರುಘಟ್ಟದ ಕಗ್ಗಲೀಪುರ ರಸ್ತೆಯಲ್ಲಿರುವ ನಿರ್ಜನ ಪ್ರದೇಶದಲ್ಲಿ ನಿಶ್ಚಿತ್‌ನ ಶವ ಪತ್ತೆಯಾಗಿದೆ. ಬಾಲಕನ ಮೇಲೆ ಬರ್ಬರ ಹಲ್ಲೆ ನಡೆಸಿದ ಪರಿಣಾಮವಾಗಿ ಆತ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ, ಆತನ ದೇಹಕ್ಕೆ ಬೆಂಕಿ ಹಚ್ಚಿದ್ದು, ಅರೆಬರೆ ಬೆಂದು ಹೋಗಿದೆ.
ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಅವರ ಕಾಲಿಗೆ ಗುಂಡು ಹಾರಿಸಿ ಅವರನ್ನು ಬಂಧಿಸುವಲ್ಲಿ ಪೊಲಿಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಕಾರ್ಯಾಚರಣೆ ವೇಳೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಗ್ಗಲಿಪುರ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ, ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದಂತಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post