ಅಹಮದಾಬಾದ್: ಮಗನೇ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಈ ಹೃದಯ ವಿದ್ರಾವಕ ಕಥೆಯನ್ನು ಕೇಳಿದವರೆಲ್ಲರೂ ಬೆಚ್ಚಿಬಿದ್ದಿದ್ದಾರೆ. ಅಮ್ಮ- ಮಗನ ಪರಿಶುದ್ಧ ಸಂಬಂಧವನ್ನು ಛಿದ್ರಗೊಳಿಸಿದ ಈ ಕತೆ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ. ಈ ಕೊಲೆ ಮಾಡಿದ ಬಳಿಕ ಆ ಯುವಕ ಅಮ್ಮನೊಂದಿಗಿನ ತನ್ನ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ನಿನ್ನನ್ನು ಕೊಂದಿದ್ದಕ್ಕೆ ನನ್ನ ಕ್ಷಮಿಸಿ ಬಿಡು ಅಮ್ಮ ಎಂದು ಕ್ಯಾಪ್ಷನ್ ಹಾಕಿದ್ದಾನೆ. ಮೃತ ತಾಯಿಯನ್ನು ಜ್ಯೋತಿಬೆನ್ ಗೋಸಾಯಿ(48) ಎಂದು ಗುರುತಿಸಲಾಗಿದ್ದು, ಆರೋಪಿ ಮಗನನ್ನು ನಿಲೇಶ್ ಗೋಸಾಯಿ ಎಂದು ಗುರುತಿಸಲಾಗಿದೆ
ಮಗ ತನ್ನ ತಾಯಿಯ ಕತ್ತು ಹಿಸುಕಿ ಕೊಂದಿದ್ದು, ಇದಾದ ಬಳಿಕ ಆರೋಪಿ ಮಗ ತನ್ನ ಇನ್ಸ್ಟಾಗ್ರಾಂನಲ್ಲಿ ತನ್ನ ತಾಯಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. ತನ್ನ ಸ್ಟೇಟಸ್ನಲ್ಲಿ “ಕ್ಷಮಿಸಿ ಬಿಡು ಅಮ್ಮ, ನಾನು ನಿನ್ನನ್ನು ಕೊಂದಿದ್ದೇನೆ, ನಾನು ನಿನ್ನನ್ನು ಕಳೆದುಕೊಂಡಿದ್ದೇನೆ, ಓಂ ಶಾಂತಿ” ಎಂದು ಬರೆದಿದ್ದಾನೆ. ಆರೋಪಿ ಯುವಕ ಈಗ ರಾಜ್‌ಕೋಟ್ ನಗರದ ವಿಶ್ವವಿದ್ಯಾಲಯ ಪೊಲೀಸರ ವಶದಲ್ಲಿದ್ದಾನೆ. ಆದರೆ ಈ ಮಗ ತನ್ನ ತಾಯಿಯನ್ನು ಏಕೆ ಕೊಂದನು? ಈ ಕಾರಣವು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ.
ಗುರುವಾರ ರಾಜ್‌ಕೋಟ್‌ನ ಯೂನಿವರ್ಸಿಟಿ ರಸ್ತೆಯಲ್ಲಿರುವ ಸರ್ಕಾರಿ ಕ್ವಾರ್ಟರ್‌ನಲ್ಲಿ ಮಗನೊಬ್ಬ ತನ್ನ ತಾಯಿಯನ್ನು ಕೊಂದಿದ್ದು ಇಡೀ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಕೊಲೆ ನಡೆದ ನಂತರ ಭರತ್ ಎಂಬ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು 48 ವರ್ಷದ ಜ್ಯೋತಿಬೆನ್ ಗೋಸಾಯಿ ಅವರ ಶವವನ್ನು ಆಕೆಯ ಮನೆಯಿಂದ ಹೊರತೆಗೆದಿದ್ದಾರೆ. ಆಕೆಯನ್ನು ಕೊಂದ ಮಗ ನಿಲೇಶ್ ಗೋಸಾಯಿಯನ್ನು ವಿಚಾರಣೆಗೊಳಪಡಿಸಿದ್ದು, ಆತ ತಾಯಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ನೀಲೇಶ್ ಮೊದಲು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದು, ತಾಯಿ ಆ ಚಾಕು ಕಿತ್ತುಕೊಂಡಿದ್ದರಿಂದ ರಕ್ತಸ್ರಾವ ಉಂಟಾಗಿದ್ದು ಬೆಳಕಿಗೆ ಬಂದಿದೆ. ಇದಾದ ಬಳಿಕ ತಾಯಿಯ ಬಾಯಿ ಹಾಗೂ ಗಂಟಲನ್ನು ಕಂಬಳಿಯಿಂದ ಒತ್ತಿ ಹತ್ಯೆ ಮಾಡಿದ್ದಾನೆ.
ಕೊಲೆಯಾದ ನಂತರ ಆತ ತನ್ನ ಸ್ನೇಹಿತ ಭರತ್ಗೆ ಮಾಹಿತಿ ನೀಡಿದ್ದು, ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನೀಲೇಶ್ನ ಮೃತ ತಾಯಿ ಜ್ಯೋತಿಬೆನ್ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥಳಾಗಿದ್ದು, ಆಗಾಗ ಜಗಳ ನಡೆಯುತ್ತಿತ್ತು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಘಟನೆ ನಡೆದ ದಿನವೂ ಇದೇ ರೀತಿ ನಡೆದಿದ್ದು, ಆರೋಪಿ ನೀಲೇಶ್ ತನ್ನ ತಾಯಿಯನ್ನು ಕೊಂದಿದ್ದಾನೆ.ಆರೋಪಿಯ ತಾಯಿ ಜ್ಯೋತಿಬೆನ್ ಮತ್ತು ಆತನ ತಂದೆ ಸುಮಾರು 20 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಹಾಗಾಗಿ ಆರೋಪಿ ನೀಲೇಶ್ ಹಾಗೂ ಆತನ ತಾಯಿ ಇಬ್ಬರೂ ಒಟ್ಟಿಗೆ ವಾಸವಾಗಿದ್ದರು. ಅವರು ತಮ್ಮ ಇತರ ಮಕ್ಕಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಮೃತ ಜ್ಯೋತಿಬೆನ್ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಕಳೆದ ಒಂದು ತಿಂಗಳಿನಿಂದ ಅವರು ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. ಈ ಕೊಲೆಯಾದ ನಂತರ ಆಕೆಯ ಮಗ ಜೈಲು ಸೇರಿದರೆ ಆಕೆಯ ಮಾಜಿ ಪತಿ ಮತ್ತು ಅವರ ಇತರ ಮಕ್ಕಳು ಆ ಶವವನ್ನು ಸ್ವೀಕರಿಸಲು ನಿರಾಕರಿಸಿದರು. ನಮಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಕೊನೆಗೆ ಪೊಲೀಸರೇ ಆ ಮಹಿಳೆಯ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post