ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಬಿಲ್ಲವರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂಬ ಬೇಡಿಕೆ ಈಡೇರಿಕೆಗೆ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಬಿಲ್ಲವ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ.
2019ರಲ್ಲಿ ಬ್ರಹ್ಮಾವರದಲ್ಲಿ ನಡೆದಿದ್ದ ಬಿಲ್ಲವರ ಭಾರಿ ಸಮಾವೇಶದ ಪ್ರಮುಖ ಬೇಡಿಕೆ ಇನ್ನೂ ಈಡೇರಿಲ್ಲ. ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಮಂಗಳೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಭಾರಿ ಸಮಾವೇಶವನ್ನು ನಡೆಸಲು ಬಿಲ್ಲವ ಸಮಾಜದ ಪ್ರಮುಖರು ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಮಾಜದ ಪ್ರಮುಖರು ಮಂಗಳವಾರ ಸಭೆ ಸೇರಿ ಸಮಾಲೋಚನೆ ನಡೆಸಿದರು.
ಈ ಕುರಿತು ಕುದ್ರೋಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ‘ಈಡಿಗ, ಬಿಲ್ಲವ, ತಿಯಾ, ನಾಮಧಾರಿಗಳನ್ನು ಒಳಗೊಂಡ 26 ಪಂಗಡಗಳ ಭಾರಿ ಸಮಾವೇಶವನ್ನು ನಡೆಸಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 500ಕ್ಕೂ ಅಧಿಕ ಮುಖಂಡರು ಸೇರಿ ತೀರ್ಮಾನಿಸಿದ್ದೇವೆ. ಸಮಾಜದ ಮುಖಂಡ ಬಿ.ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ 2023ರ ಜ.29ರಂದು ಸಮಾವೇಶ ನಡೆಯಲಿದೆ. ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ’ ಎಂದು ತಿಳಿಸಿದರು.
ಇದಕ್ಕಾಗಿ ಐದಾರು ಜಿಲ್ಲೆಗಳಲ್ಲಿ ಹರಡಿರುವ 26 ಪಂಗಡಗಳನ್ನು ಒಟ್ಟುಗೂಡಿಸಿ ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಜನವರಿ 29ರಂದು ಬಿಲ್ಲವರ ಸಮಾವೇಶ ನಡೆಯಲಿದ್ದು ಲಕ್ಷಾಂತರ ಜನರು ಸೇರಿ ಹಕ್ಕೊತ್ತಾಯ ಮಂಡಿಸಲಿದ್ದಾರೆ. ಮಂಗಳೂರು ನಗರದಲ್ಲಿಯೇ ಕಾರ್ಯಕ್ರಮ ನಡೆಯಲಿದ್ದು ಎಲ್ಲಿ ಮಾಡಬೇಕು ಎನ್ನುವುದನ್ನು ಸದ್ಯದಲ್ಲೇ ತೀರ್ಮಾನಿಸುತ್ತೇವೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
‘ಅಂದು ಸಂಜೆ 3 ಗಂಟೆಗೆ ಮೆರವಣಿಗೆ ಆರಂಭವಾಗಲಿದ್ದು, 4 ಗಂಟೆಗೆ ಸಮಾವೇಶ ನಡೆಯಲಿದೆ. ಕುದ್ರೋಳಿ, ಕಟಪಾಡಿ ವಿಶ್ವನಾಥ ಕ್ಷೇತ್ರ, ಗೆಜ್ಜೆಗಿರಿ ಕ್ಷೇತ್ರ, ಕಂಕನಾಡಿ ಗರೋಡಿಯ ಪ್ರಮುಖರು ಸಹಮತ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತ ಬಿಲ್ಲವ ಮಹಾಮಂಡಲ, ಅಖಿಲ ಭಾರತ ಬಿಲ್ಲವರ ಯೂನಿಯನ್, ತಿಯಾ ಸಮಾಜದ ಪ್ರಮುಖರು ಹಾಗೂ ಸಮಾಜದ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ಸಮಾವೇಶದ ಸಲುವಾಗಿ ತಾತ್ಕಾಲಿಕ ಸಮಿತಿಯನ್ನೂ ರಚಿಸಿದ್ದೇವೆ. ನಾನು ಹಾಗೂ ಪದ್ಮರಾಜ್ ಸಂಚಾಲಕರಾಗಿ ಆಯ್ಕೆಯಾಗಿದ್ದೇವೆ. ಏಳು ಮಂದಿ ಗೌರವ ಸಲಹೆಗಾರರು ಇರಲಿದ್ದಾರೆ’ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post