ಮಂಗಳೂರು, ನ.30 : ಉಳ್ಳಾಲದ ಜ್ಯುವೆಲ್ಲರಿ ಒಂದಕ್ಕೆ ಕನ್ನ ಕೊರೆದು ದರೋಡೆಗೆ ಸಂಚು ರೂಪಿಸಿದ ಕುಖ್ಯಾತ ಆಂತಾರಾಜ್ಯ ಜ್ಯುವೆಲ್ಲರಿ/ ಬ್ಯಾಂಕ್ ದರೋಡೆ ಗ್ಯಾಂಗ್ ನ 9 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.


ನ. 29-30ರ ರಾತ್ರಿ ವೇಳೆ ತೊಕ್ಕೊಟ್ಟು ಮಂಚಿಲ ಪರಿಸರದ ಮನೆಯೊಂದರಲ್ಲಿ ಉತ್ತರ ಭಾರತದ ಕುಖ್ಯಾತ “ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ” ನ ವ್ಯಕ್ತಿಗಳು ತೊಕ್ಕೊಟ್ಟಿನ ಜ್ಯುವೆಲ್ಲರಿ ಅಂಗಡಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರು ಮೂಲತಃ ಬಂಟ್ವಾಳ ತಾಲೂಕಿನ ಕನ್ಯಾನದ ಪ್ರಸ್ತುತ ಗುಜರಾತ್‌ನಲ್ಲಿ ವಾಸವಾಗಿರುವ ಭಾಸ್ಕರ ಬೆಳ್ಚಪಾಡ(65), ನೇಪಾಳ ಮೂಲದ ಪ್ರಸ್ತುತ ಗುಜರಾತ್‌ನ ದಿನೇಶ್ ರಾವಲ್ ಯಾನೆ ಸಾಗರ್ ಯಾನೆ ದಿಲ್ಲಿ(38), ಜಾರ್ಖಂಡ್‌ನ ಮುಹಮ್ಮದ್ ಜಾಮೀಲ್ ಶೇಖ್ (29) ಮತ್ತು ಇಂಜಮಾಮ್ ಉಲ್ ಹಕ್(27), ಮೂಲತಃ ನೇಪಾಳದ ಬಿಸ್ತ ರೂಪ್ ಸಿಂಗ್ (34), ಕೃಷ್ಣ ಬಹದ್ದೂರ್ ಬೋಗಟ (41), ಜಾರ್ಖಂಡ್‌ನ ಇಮ್ದದುಲ್ ರಝಾಕ್ ಶೇಖ್, (32), ಬಿವುಲ್ ಶೇಖ್ (31), ಇಮ್ರಾನ್ ಶೇಖ್(30), ಎಂಬವರನ್ನು ಬಂಧಿಸಿದ್ದಾರೆ. ಈ ಮೂಲಕ ಜ್ಯುವೆಲ್ಲರಿ ದರೋಡೆಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ.


ಇತ್ತೀಚೆಗೆ ಮಂಗಳೂರು ನಗರದ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಆಂಬಿಕಾ ರೋಡ್, ಉಚ್ಚಿಲ ಬಳಿಯಿಂದ ರಾತ್ರಿ ವೇಳೆಯಲ್ಲಿ ಮೂರು ದ್ವಿಚಕ್ರ ವಾಹನದ ಸವಾರರನ್ನು ಅಡ್ಡಗಟ್ಟಿ ಹಿಂದಿ ಭಾಷೆಯಲ್ಲಿ ಬೈದು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಅವರಿಂದ ಸ್ಕೂಟರ್ ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ್ದರು, ಈ ಸ್ಕೂಟರ್ ನ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಇದೇ ಸಾಹೇಜ್ ಗಂಜ್ ದರೋಡೆ ಗ್ಯಾಂಗ್ ನ ಆರೋಪಿಗಳು ಜ್ಯುವೆಲ್ಲರಿ ದರೋಡೆ ನಡೆಸಲು ಸಂಚು ರೂಫಿಸುವ ಸಮಯ ಸ್ಥಳೀಯವಾಗಿ ಓಡಾಟದ ಸಲುವಾಗಿ ಈ ಸ್ಕೂಟರ್ ಗಳ ಸವಾರರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಸುಲಿಗೆ ಮಾಡಿ ಉಪಯೋಗಿಸುತ್ತಿದ್ದರು. ಮೇಲ್ಕಂಡ ಮೂರು ಸ್ಕೂಟರ್ ಗಳನ್ನು ಕೂಡಾ ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.


ಆರೋಪಿಗಳೆಲ್ಲರೂ ಉತ್ತರ ಭಾರತ ಮೂಲದ ಕುಖ್ಯಾತ “ಸಾಹೇಬ್ ಗಂಜ್” ದರೋಡೆ ಗ್ಯಾಂಗ್ ನ ಸದಸ್ಯರಾಗಿದ್ದು, ತೊಕ್ಕೊಟ್ಟಿನ ಸೂಪರ್ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡುವ ಉದ್ದೇಶದಿಂದ ಸುಮಾರು 15 ದಿನಗಳ ಹಿಂದೆ ಮಂಗಳೂರಿಗೆ ರೈಲಿನಲ್ಲಿ ಬಂದು ನಂತರ ತೊಕ್ಕೊಟ್ಟು ಬಳಿಯ ಲಾಡ್ಜ್ ವೊಂದರಲ್ಲಿ ಹಾಗೂ ತೊಕ್ಕೊಟ್ಟು ಮಂಚಿಲ ಬಳಿಯ ವ್ಯಕ್ತಿಯೊಬ್ಬರ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ದರೋಡೆಗೆ ಸಂಚು ರೂಫಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಸೂಪರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಜ್ಯುವೆಲ್ಲರಿಯನ್ನು ಗುರುತಿಸಿಕೊಂಡಿದ್ದು, ದರೋಡೆಗೆ ಬೇಕಾದ ಗ್ಯಾಸ್ ಕಟ್ಟರ್, ಅಕ್ಸಿಜನ್ ಸಿಲಿಂಡರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟಿಂಗ್ ನೋಝಲ್, ಕಟ್ಟಿಂಗ್ ಹೋಸ್ ಪೈಪ್, ಲೆದರ್ ಹ್ಯಾಂಡ್ ಗ್ಲೌಸ್, ಕಬ್ಬಿಣದ ರಾಡ್, ತಲವಾರು, ಅಕ್ಸೋ ಬ್ಲೇಡ್, ಹ್ಯಾಮರ್, ಸ್ಕ್ರೂಡ್ರೈವರ್, ಮೆಣಸಿನ ಹುಡಿ, ನೈಲಾನ್ ಹಗ್ಗ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,90,000/ಆಗಿರುತ್ತದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Discover more from Coastal Times Kannada
Subscribe to get the latest posts sent to your email.







Discussion about this post