ಮಂಗಳೂರು, ಜ 01 : ಪಣಂಬೂರು ಬೀಚ್ ನಲ್ಲಿರುವ ಆಹಾರ ಮಳಿಗೆಗಳ ಮೇಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ದಿಢೀರ್ ದಾಳಿ ನಡೆಸಿ ಹತ್ತಕ್ಕೂ ಅಧಿಕ ಅಂಗಡಿಗಳಲ್ಲಿ ಸ್ವಚ್ಛತೆಯ ಕೊರತೆ ಕಂಡು ಬಂದಿರುವುದರಿಂದ ತಕ್ಷಣ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.
ಪತ್ರಕರ್ತರ ಸಂಘ, ದ.ಕ. ಜಿಲ್ಲಾಡಳಿತ ಸಹಿತ ಬ್ರಾಂಡ್ ಮಂಗಳೂರಿನ ಪರಿಕಲ್ಪನೆಯಲ್ಲಿ ಸಮುದ್ರ ಕಿನಾರೆಯ ಸ್ವಚ್ಛತೆಗೆ ಯೋಜನೆಯನ್ನು ಹಮ್ಮಿಕೊಂಡು ಅದರಂತೆ ಜಿಲ್ಲಾಧಿಕಾರಿ ಉದ್ಘಾಟನೆಗೆ ಆಗಮಿಸಿದ್ದರು. ಬಳಿಕ ಆಹಾರ ಸ್ಟಾಲ್ ಗಳು ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಪರಿಸರ ಸ್ವಚ್ಛತೆಯ ಕುರಿತು ಕ್ಲಾಸ್ ತೆಗೆದುಕೊಂಡರು.


ಇದೇ ವೇಳೆ, ಅಲ್ಲಿದ್ದ ಫಾಸ್ಟ್ ಫುಡ್ ಸೆಂಟರ್ ಒಂದಕ್ಕೆ ಹೊಕ್ಕ ಜಿಲ್ಲಾಧಿಕಾರಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದಾಗ ಸ್ವತಃ ಶಾಕ್ ಆಗಿದ್ದಾರೆ. ಫಾಸ್ಟ್ ಫುಡ್ ಒಳಗಡೆ ಬಳಸುತ್ತಿದ್ದ ನೀರು ಗಬ್ಬು ನಾರುತ್ತಿತ್ತು. ಬ್ಯಾರೆಲ್ ನಲ್ಲಿ ತುಂಬಿಟ್ಟಿದ್ದ ನೀರು ಕಪ್ಪಾಗಿದ್ದರೆ, ಗೋಬಿ ಮಂಚೂರಿ ಕಾಯಿಸಲು ಬಳಸುತ್ತಿದ್ದ ಎಣ್ಣೆಯೂ ಜಿಡ್ಡು ಗಟ್ಟಿ ಟಾರೆಣ್ಣೆಯಂತಾಗಿತ್ತು. ಗೋಬಿಯನ್ನು ತೆಗೆದು ನೋಡಿದರೆ, ಹುಳಗಳು ಹರಿದಾಡುತ್ತಿದ್ದವು. ವ್ಯಾಪಾರಿಗಳನ್ನು ಏನ್ರೀ ಇದು.. ನಿಮಗೆ ಯಾರ್ರೀ ಲೈಸನ್ಸ್ ಕೊಟ್ಟಿದ್ದು.. ಲೈಸನ್ಸ್ ಕೊಡ್ರೀ ಎಂದು ಜಿಲ್ಲಾಧಿಕಾರಿ ಕೇಳಿದಾಗ, ನಾವು ಇಪ್ಪತ್ತು ವರ್ಷ ಆಯ್ತು.. ಯಾವುದೇ ಲೈಸನ್ಸ್ ಮಾಡಿಕೊಂಡಿಲ್ಲ. ಯಾರು ಕೂಡ ನಮ್ಮನ್ನು ಲೈಸನ್ಸ್ ಕೇಳಲು ಬಂದಿಲ್ಲ ಎಂದು ಉತ್ತರಿಸಿದರು. ಜೊತೆಗಿದ್ದ ಕೆಲವರು ಜಿಲ್ಲಾಧಿಕಾರಿಗೆ ಸಮಜಾಯಿಷಿ ನೀಡಲು ಹೋದರಾದರೂ, ಅಧಿಕಾರಿ ಯಾವುದಕ್ಕೂ ಕ್ಯಾರ್ ಮಾಡಲಿಲ್ಲ. ಬಳಿಕ ಸಮೀಪದ ಎಲ್ಲಾ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಶುಚಿತ್ವದ ಕೊರತೆ ಕಂಡು ಬಂದ ಮಳಿಗೆಗಳ ಮೇಲೆ ಬೀಗ ಮುದ್ರಿಸುವಂತೆ ಸೂಚನೆ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.


ಪಣಂಬೂರಿನಲ್ಲಿ ಯಾರೊಬ್ಬರ ಬಳಿಯೂ ಲೈಸನ್ಸ್ ಇರಲಿಲ್ಲ. ಅಷ್ಟೇ ಅಲ್ಲದೆ, ಕೊಳೆತ ಕ್ಯಾಬೇಜ್ ಬಳಸಿ ಗೋಬಿ ಮಂಚೂರಿ ಮಾಡುತ್ತಿದ್ದರು. ಅದಕ್ಕೆ ಎಸೆನ್ಸ್ ಇನ್ನಿತರ ಕೆಮಿಕಲ್ ಬಳಸಿ ಗೋಬಿ ಮಾಡುತ್ತಿದ್ದುದನ್ನು ನೋಡಿದ ಜಿಲ್ಲಾಧಿಕಾರಿ ಫುಲ್ ಗರಂ ಆಗಿದ್ದಾರೆ. ಆನಂತರ, ಪ್ರತೀ ಅಂಗಡಿಯಿಂದಲೂ ಗೋಬಿ ಇನ್ನಿತರ ತಿಂಡಿಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲಿದ್ದ ಎಲ್ಲ ಗೋಬಿ ಮಂಚೂರಿಯನ್ನು ಸ್ಥಳದಲ್ಲೇ ಚರಂಡಿಗೆ ಸುರಿಯಲು ಸೂಚಿಸಿದ್ದಾರೆ. 



ಟಾಯ್ಲೆಟಲ್ಲೇ ಅಡುಗೆ, ಅಲ್ಲಿಯೇ ಊಟ ! ;ಪಣಂಬೂರು ಬೀಚ್ ಬಳಿಯಲ್ಲೇ ಸರಕಾರದ ವತಿಯಿಂದ ಸುಲಭ್ ಶೌಚಾಲಯ ಇದೆ. ಅದನ್ನು ಸ್ಥಳೀಯವಾಗಿ ನಿರ್ವಹಣೆ ಮಾಡಲು ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ, ನಿರ್ವಹಣೆ ಮಾಡುತ್ತಿದ್ದ ಸಿಬಂದಿ ಅದೇ ಶೌಚಾಲಯದ ಒಂದು ಬದಿಯಲ್ಲಿ ತಮ್ಮ ಊಟ, ವಸತಿಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಹೊರಗಿನಿಂದ ವಿಐಪಿ ಟಾಯ್ಲೆಟ್ ಎಂದು ಹೆಸರು ಹಾಕಿ, ನಾಲ್ಕು ಟಾಯ್ಲೆಟ್ ಮುಚ್ಚಲಾಗಿತ್ತು. ಮಹಿಳೆಯರು, ಮಕ್ಕಳು ಟಾಯ್ಲೆಟ್ ಹೊರಗೆ ಸೇರಿದ್ದನ್ನು ನೋಡಿದ ಜಿಲ್ಲಾಧಿಕಾರಿ, ಅಲ್ಲಿಗೆ ತೆರಳಿದ್ದರು. ಅಲ್ಲಿ ವಿಐಪಿ ಟಾಯ್ಲೆಟ್ ಎಂದು ಹೆಸರು ಹಾಕಿದ್ದನ್ನು ನೋಡಿ ಒಳಹೋದಾಗ ಶಾಕ್ ಆಗುವ ಸರದಿ. ಒಳಗೆ ಚಾಪೆ ದಿಂಬು ಇಡಲಾಗಿತ್ತು. ಕೆಲವರು ಮಲಗಿಕೊಂಡಿದ್ದರೆ, ಮತ್ತೊಂದ್ಕಡೆ ಅಡುಗೆ ಮಾಡುವುದಕ್ಕೆ ಸ್ಟೌವ್, ಪಾತ್ರೆಗಳನ್ನು ಇಡಲಾಗಿತ್ತು.
ಒಟ್ಟಿನಲ್ಲಿ, ವ್ಯಾಪಾರದ ದೃಷ್ಟಿಯಿಂದ ಮಾತ್ರ ಗಮನ ನೀಡುತ್ತಿದ್ದ ಅಂಗಡಿ, ಹೋಟೆಲ್ ಮಾಲಕರಿಗೆ ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post