ತುಮಕೂರು, ಫೆ 2: ಅದೊಂದು ರೀತಿಯ ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ. ತುಮಕೂರು ನಗರದಲ್ಲಿ ನಡೆದಿದೆ. ಶ್ರೀಮಂತ ಉದ್ಯಮಿಯೊಬ್ಬರ ಮಗಳು, ಮದುವೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ಮನೆಯ ಪಾರ್ಟ್ ಟೈಂ ವಾಹನ ಚಾಲಕನೊಂದಿಗೆ ಓಡಿಹೋಗಿ ಮದುವೆಯಾಗಿರುವ ಘಟನೆ ಕುಟುಂಬವನ್ನೇ ಬೆಚ್ಚಿಬೀಳಿಸಿದೆ.
ತುಮಕೂರು ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತುಮಕೂರು ನಗರ ನಿವಾಸಿ ಹಾಗೂ ಉದ್ಯಮಿಯೊಬ್ಬರ ಮಗಳಿಗೆ ತನ್ನದೇ ಮನೆಗೆ ಪಾರ್ಟ್ ಟೈಂ ಚಾಲಕನಾಗಿ ಬರುತಿದ್ದ ರವೀಶ ಎಂಬಾತನ ಜೊತೆ ಪ್ರೇಮಾಂಕುರವಾಗಿದೆ. ಈ ವಿಚಾರ ಆಕೆಯ ಅಣ್ಣನಿಗೆ ತಿಳಿದು ಎಚ್ಚರಿಕೆ ಸಹ ನೀಡಿದ್ದರು. ಇದಾದ ಬಳಿಕ ಈ ಹಿಂದೆ ಕೊಟ್ಟ ಮಾತಿನಂತೆ ಮಾವನ ಮಗನ ಜೊತೆ ಆಕೆಯ ಮದುವೆಗೆ ಕುಟುಂಬ ನಿಶ್ಚಯಿಸಿ ನಿಶ್ಚಿತಾರ್ಥ ಸಹ ಮುಗಿಸಿದೆ. ಇದಾದ ಬಳಿಕ, ಮದುವೆಗೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ, ಜನವರಿ 19ರಂದು ಯವತಿ ಮನೆಯ ರವೀಶ ಜೊತೆ ಓಡಿಹೊಗಿದ್ದಾಳೆ. ಚಿಕ್ಕನಾಯಕನಹಳ್ಳಿಯಲ್ಲಿ ಮದುವೆಯಾಗಿದ್ದಾಳೆ. ಇತ್ತ ಮಗಳು ಕಾಣದ ಹಿನ್ನಲೆ ಕಾಣೆಯಾದ ಬಗ್ಗೆ ನಗರ ಠಾಣೆಗೆ ದೂರು ನೀಡಿದ ಕುಟುಂಬಕ್ಕೆ ಶಾಕ್ ಆಗಿದೆ. ಅತ್ತ ಯುವತಿಯೇ, ‘ಕುಟುಂಬದವರಿಂದ ಬೆದರಿಕೆ ಇದೆ, ನನಗೆ ಭದ್ರತೆ ಬೇಕು’ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.
ಯುವತಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಕೆಯ ಸಹೋದರ, “ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆ ನಿಶ್ಚಯಿಸಿಲ್ಲ. ಅವಳ ಒಪ್ಪಿಗೆಯೊಂದಿಗೆ ಚಿನ್ನಾಭರಣ, ಸೀರೆ ಖರೀದಿ ಹಾಗೂ ಮದುವೆ ಕಾರ್ಡ್ ಮುದ್ರಣ ಮಾಡಲಾಗಿತ್ತು. ತಾಯಿಯ ಆರೋಗ್ಯ ಸಮಸ್ಯೆಯ ನಡುವೆಯೂ ಮದುವೆ ಸಿದ್ಧತೆಗಾಗಿ ಓಡಾಡುತ್ತಿದ್ದೆವು. ಮದುವೆ ಇಷ್ಟವಿಲ್ಲ ಎಂದು ಹೇಳಬಹುದಿತ್ತು. ಈ ರೀತಿಯ ನಡೆ ನಮಗೆ ಆಘಾತ ತಂದಿದೆ” ಎಂದು ತಿಳಿಸಿದ್ದಾರೆ.
ಯುವತಿ ಕಾಣೆಯಾದ ಕುರಿತು ಪ್ರಕರಣ ದಾಖಲಾದ ಬಳಿಕ, ಪ್ರೇಮಿಗಳು ಮದುವೆಯಾಗಿರುವುದು ದೃಢಪಟ್ಟಿದೆ. ಕುಟುಂಬಸ್ಥರಿಂದ ಬೆದರಿಕೆ ಆರೋಪ ಇರುವ ಹಿನ್ನೆಲೆಯಲ್ಲಿ, ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆಯಿತು. ಎರಡೂ ಕಡೆಯ ಕುಟುಂಬಗಳು ಒಪ್ಪಿಗೆ ಸೂಚಿಸಿ, ಖುಲಾಸೆ ಪತ್ರಗಳಿಗೆ ಸಹಿ ಹಾಕಿದ ಬಳಿಕ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post