ಮಂಗಳೂರು: ನಗರದ ನಂದಿಗುಡ್ಡೆ ಬಳಿ ಪ್ರತ್ಯೂಶ್ ಸಾಲಿಯಾನ್ ಎಂಬವರಿಗೆ ಜೀವ ಬೆದರಿಕೆ ಹಾಕಿ ಕೊಲೆ ಯತ್ನ ನಡೆಸಿದ ಪ್ರಕರಣದಲ್ಲಿ ಸಂಜಯ್ ಪೂಜಾರಿ ಎಂಬಾತನಿಗೆ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಜಪ್ಪು ಬಪ್ಪಾಲ್ ನಿವಾಸಿ ಪ್ರತ್ಯೂಶ್ ಸಾಲಿಯಾನ್ ಆನ್ ಲೈನ್ ಗೇಮ್ ನಲ್ಲಿ ತನ್ನನ್ನು ಸೋಲಿಸಿದ ವಿಚಾರವಾಗಿ ಸಂಜಯ್ ಪೂಜಾರಿಗೆ ದ್ವೇಷವಿತ್ತು. 2023ರ ಮೇ 17ರಂದು ಸಂಜೆ 3.40ರ ವೇಳೆಗೆ ಪ್ರತ್ಯೂಶ್ ತನ್ನ ಮನೆಯಿಂದ ನಂದಿಗುಡ್ಡೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸಂಜಯ್ ತಡೆದು ನಿಲ್ಲಿಸಿದ್ದಾನೆ. ಬಳಿಕ ಅವಾಚ್ಯ ಶಬ್ಧಗಳಿಂದ ಬೈದು ಚೂರಿಯಿಂದ ಕೊಲೆಯತ್ನ ನಡೆಸಿ, ಜೀವ ಬೆದರಿಕೆಯನ್ನೂ ಹಾಕಿದ್ದಾನೆ.
ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪಿಎಸ್ಐ ಶೀತಲ್ ಅಲಗೂರು ತನಿಖೆ ನಡೆಸಿದ್ದು, ಪಿಎಸ್ಐ ಮನೋಹರ್ ಪ್ರಸಾದ್ ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್.ಅವರು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಂಜಯ್ ಪೂಜಾರಿಗೆ ಜ.31ರಂದು 4 ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ವಾದ ಮಂಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post