ಮಂಗಳೂರು : ಮಂಗಳೂರು ಕೆಥೋಲಿಕ್ ಕೋ- ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಧ್ಯಕ್ಷ ಅನಿಲ್ ಕುಮಾರ್ ಲೋಬೋ ಹಾಗೂ ನಿರ್ದೇಶಕ ಜೋಸೆಫ್ ಎಂ. ಅನಿಲ್ ಪತ್ರಾವೋ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅಧಿಕಾರವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಬ್ಯಾಂಕ್ ಸದಸ್ಯ ಜೆರಾರ್ಡ್ ಟವರ್ಸ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಮಂಗಳೂರು ಕೆಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪ್ರಧಾನ ಕಚೇರಿ ಹೊಂದಿದ್ದು ಬ್ಯಾಂಕಿನಲ್ಲೀಗ ಅಧ್ಯಕ್ಷರು ಮತ್ತು ನಿರ್ದೇಶಕರೇ ಸೇರಿಕೊಂಡು ಬ್ಯಾಂಕಿನ ಆಸ್ತಿಯನ್ನು ಕೊಳ್ಳೆ ಹೊಡೆಯುತ್ತಿರುವ ಗೋತ್ತಾಗಿರುವುದರಿಂದ, ತಕ್ಷಣವೇ ಈ ಇಬ್ಬರನ್ನು ಅಧಿಕಾರದಿಂದ ಅನರ್ಹತೆಗೊಳಿಸಬೇಕು ಹಾಗೂ ಇದೆಲ್ಲಕ್ಕೂ ಬೆಂಬಲವಾಗಿ ನಿಂತ ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಅವರನ್ನು ತಕ್ಷಣದಿಂದ ವಜಾಗೊಳಿಸಬೇಕು. ಸಹಕಾರ ಸಂಘಗಳ ರಿಜಿಸ್ಟ್ರಾರ್ ತಕ್ಷಣವೇ ಇವರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮೂರು ವರ್ಷಗಳ ಹಿಂದೆ ಬ್ಯಾಂಕಿನ ಅಧ್ಯಕ್ಷನಾಗಿ ಗುತ್ತಿಗೆ ವಹಿಸಿಕೊಂಡಿರುವ ಅನಿಲ್ ಕುಮಾರ್ ಲೋಬೊ ಬ್ಯಾಂಕನ್ನು ತನ್ನ ಕುಟುಂಬದ ಆಸ್ತಿ ಎಂಬಂತೆ ಮಾಡಿಕೊಂಡಿದ್ದಾನೆ. ತನ್ನ ಗೆಳೆಯರಿಗೆ ಕೋಟಿ ಕೋಟಿ ರೂಪಾಯಿಯನ್ನು ಸಾಲದ ರೂಪದಲ್ಲಿ ನೀಡಿದ್ದಲ್ಲದೆ, ಅದರಲ್ಲಿ ಪರ್ಸೆಂಟೇಜ್ ಲೆಕ್ಕದಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾನೆ. ಬ್ಯಾಂಕಿನ ಅಧ್ಯಕ್ಷ ಅನಿಲ್ ಕುಮಾರ್ ಲೋಬೊ ಮತ್ತು ನಿರ್ದೇಶಕನಾಗಿರುವ ಜೋಸೆಫ್ ಎಂ. ಅನಿಲ್ ಪತ್ರಾವೋ ಸೇರಿಕೊಂಡು ಬ್ಯಾಂಕಿನಿಂದ ಬೇಕಾಬಿಟ್ಟಿ ಸಾಲ ಕೊಟ್ಟಿದ್ದು ಅಲ್ಲದೆ, ಅದನ್ನು ತಮ್ಮದೇ ಸಂಸ್ಥೆಗಳಿಗೆ ವರ್ಗಾಯಿಸಿದ್ದಾರೆ. ಇವರ ಅಕ್ರಮ ವಹಿವಾಟುಗಳಿಗೆ ಬ್ಯಾಂಕಿನ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿರುವ ಸುನೀಲ್ ಮಿನೇಜಸ್ ಸಾಥ್ ನೀಡಿದ್ದಾನೆ.
ಬ್ಯಾಂಕಿನೊಳಗಿನ ಅಕ್ರಮ, ಬೇಕಾಬಿಟ್ಟಿ ಪರಭಾರೆ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಕೋ-ಆಪರೇಟಿವ್ ಸೊಸೈಟಿಗಳ ರಿಜಿಸ್ಟ್ರಾರ್ ಗೆ ದೂರು ನೀಡಿದ್ದು ಬ್ಯಾಂಕಿನ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಆರ್ ಬಿಐಗೂ ಪತ್ರ ಬರೆದಿದ್ದಾರೆ. ಅದರಂತೆ, ಆರ್ ಬಿಐ ಅಧಿಕಾರಿಗಳು ಬ್ಯಾಂಕಿನ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಿದ್ದು, ಬ್ಯಾಂಕಿನ ಅಧ್ಯಕ್ಷ ಮತ್ತು ಆತನ ಗೆಳೆಯರು ಹಲವಾರು ಕೋಟಿ ಮೊತ್ತದ ಅವ್ಯವಹಾರ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಮೈಕ್ಸ್ ಇಲೆಕ್ಟ್ರಾನಿಕ್ಸ್ ಹೆಸರಲ್ಲಿ ಸಂಸ್ಥೆ ಹೊಂದಿದ್ದ ಅನಿಲ್ ಕುಮಾರ್ ಲೋಬೋ ತನ್ನ ವ್ಯವಹಾರ ಪಾಲುದಾರಿಕೆ ನೆಪದಲ್ಲಿ ಸವಿಲ್ ಮಸ್ಕರೇನಸ್ ಎಂಬ ವ್ಯಕ್ತಿಯ ಹೆಸರಲ್ಲಿ ಕೋಟ್ಯಂತರ ರೂ. ಸಾಲ ಪಡೆದಿದ್ದು, ಅದನ್ನು ನಿರಂತರವಾಗಿ ತನ್ನ ಮತ್ತು ಪತ್ನಿಯ ಹೆಸರಿಗೆ ವರ್ಗಾವಣೆ ಮಾಡಿರುವುದು ಕಂಡುಬಂದಿದೆ.
2017ರ ಮಾರ್ಚ್ 15ರಂದು ಸವಿಲ್ ಪ್ರಕಾಶ್ ಹೆಸರಲ್ಲಿ 38 ಲಕ್ಷ ಸಾಲ ಪಡೆದಿದ್ದು, ಅದನ್ನು ಮರುದಿನವೇ ಅನಿಲ್ ಕುಮಾರ್ ಲೋಬೊ, ಆತನ ಪತ್ನಿ ಅನ್ನಾ ಮರಿಯಾ ಲೋಬೊ ಮತ್ತು ಈ ಮೂವರೂ ಒಳಗೊಂಡಿರುವ ಜಂಟಿ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಇದೇ ರೀತಿ 2019ರ ಜೂನ್ 6ರಂದು 84 ಲಕ್ಷ ಸಾಲವನ್ನು ಸವಿಲ್ ಪ್ರಕಾಶ್ ಹೆಸರಲ್ಲಿ ಎಂಸಿಸಿ ಬ್ಯಾಂಕಿನಿಂದ ತೆಗೆಯಲಾಗಿತ್ತು. ಅದನ್ನು ಸಾಲದ ಖಾತೆಯಿಂದಲೇ ಬ್ಯಾಂಕಿನ ಅಧ್ಯಕ್ಷ ಅನಿಲ್ ಕುಮಾರ್ ಲೋಬೊ ಮತ್ತು ಆತನ ಪತ್ನಿಯ ಖಾತೆಗೆ 20 ಲಕ್ಷ ಮತ್ತು ತಲಾ 10 ಲಕ್ಷದಂತೆ ಅದೇ ತಿಂಗಳಲ್ಲಿ ವರ್ಗಾವಣೆ ಮಾಡಿದ್ದು ಕಂಡುಬಂದಿದೆ. ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಬೇರೆ ಬೇರೆ ಬ್ಯಾಂಕುಗಳಲ್ಲಿರುವ ಅನಿಲ್ ಕುಮಾರ್ ಮತ್ತು ಆತನ ಪತ್ನಿಯ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿತ್ತು. 2020ರ ಜೂನ್ 9ರಂದು ಸವಿಲ್ ಪ್ರಕಾಶ್ ಹೆಸರಲ್ಲಿ 75 ಲಕ್ಷ ಸಾಲ ಮಂಜೂರಾಗಿದ್ದು, ಅದರಲ್ಲಿ 39 ಲಕ್ಷ ರೂ.ವನ್ನು ಅನಿಲ್ ಕುಮಾರ್ ಲೋಬೋ ಅವರ ಐಡಿಬಿಐ ಬ್ಯಾಂಕಿನ ಖಾತೆಗೆ ಸೆ.29ರಂದು ವರ್ಗಾವಣೆ ಮಾಡಲಾಗಿತ್ತು.
ಅನಿಲ್ ಕುಮಾರ್ ಲೋಬೊ, ಆತನ ಪತ್ನಿ ಅನ್ನಾ ಮರಿಯಾ ಲೋಬೊ ಮತ್ತು ಸವಿಲ್ ಮಸ್ಕರೇನಸ್ ಎಂಸಿಸಿ ಬ್ಯಾಂಕಿನಲ್ಲಿ ಜಂಟಿ ಪಾಲುದಾರಿಕೆ ನೆಲೆಯಲ್ಲಿ ಖಾತೆ ಹೊಂದಿದ್ದು, ಅನಿಲ್ ಕುಮಾರ್ ಲೋಬೊ ಅಧ್ಯಕ್ಷನಾಗಿ ನೇಮಕ ಆಗುವ ಹೊತ್ತಲ್ಲೇ ಎರಡು ಬಾರಿ ದೊಡ್ಡ ಮೊತ್ತದ ಸಾಲ ಪಾವತಿಯಾಗಿತ್ತು. ಬ್ಯಾಂಕಿನ ಕುಲಶೇಖರ ಶಾಖೆಯಿಂದ ಮೂರು ಬಾರಿ ಸಾಲ ತೆಗೆದಿದ್ದು ಮ್ಯಾನೇಜರ್ ಮತ್ತು ಸಿಇಓ ಆಗಿದ್ದವರನ್ನು ಬೆದರಿಸಿ ಅಕ್ರಮವಾಗಿ ಪಡೆಯಲಾಗಿತ್ತು ಅನ್ನುವ ಆರೋಪವನ್ನು ಜೆರಾರ್ಡ್ ಟವರ್ಸ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ತನ್ನ ಗೆಳೆಯರಿಗೂ ಬೇಕಾಬಿಟ್ಟಿ ಸಾಲ ತೆಗೆಸಿಕೊಟ್ಟು ಅದರಿಂದಲೂ ಅನಿಲ್ ಕುಮಾರ್ ಲೋಬೊ ಕಿಕ್ ಬ್ಯಾಕ್ ಪಡೆದಿದ್ದಾನೆ. ಎಲಿಯಾಸ್ ಸ್ಯಾಂಕ್ಟಿಸ್ ಎಂಬ ವ್ಯಕ್ತಿಗೆ ಎಂಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಿಂದ 1.70 ಕೋಟಿ ಸಾಲವನ್ನು 2020ರ ಆಗಸ್ಟ್ 31ರಂದು ನೀಡಲಾಗಿತ್ತು. ಅದೇ ದಿನ ಸಾಲದ ಮೊತ್ತ ಎಲಿಯಾಸ್ ಸ್ಯಾಂಕ್ಟಿಸ್ ಅವರ ಕಾರ್ಪೊರೇಶನ್ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿತ್ತು. ಆದರೆ, ಸೆ.15ರಂದು ಸ್ಯಾಂಕ್ಟಿಸ್ ಅವರ ಖಾತೆಯಿಂದ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಕುಮಾರ್ ಲೋಬೊ ಮತ್ತು ಆತನ ಪತ್ನಿ ಅನ್ನಾ ಮರಿಯಾ ಲೋಬೊ ಅವರ ಖಾತೆಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಪರ್ಸೆಂಟೇಜ್ ಹೆಸರಲ್ಲಿ ಕಿಕ್ ಬ್ಯಾಕ್ ನೀಡಲಾಗಿತ್ತು. ಬ್ಯಾಂಕಿನ ಅಧ್ಯಕ್ಷನಾಗಿ ವ್ಯಾಪಕ ಭ್ರಷ್ಟಾಚಾರ ಮಾಡಿರುವುದಕ್ಕೆ ದಾಖಲೆಗಳು ಲಭ್ಯವಾಗಿದೆ ,ಇದಕ್ಕಿಂತಲೂ ಹೆಚ್ಚಿನ ಬ್ಯಾಂಕಿನಲ್ಲಿ ಇದಕ್ಕಿಂತಲೂ ಹೆಚ್ಚಿ ಅವ್ಯವಹಾರ ನಡೆದಿರುವ ಅನುಮಾನಗಳು ಕೇಳಿಬರುತ್ತದೆ.