ಮಂಗಳೂರು, ಎ.2: ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ಹೆಸರಲ್ಲಿ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ (Medical Seat Scam) ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ಅಮಾಯಕರನ್ನು ಮೋಸ ಮಾಡಿರುವ ಪ್ರಕರಣದ ಆರೋಪಿ ಉತ್ತರ ಪ್ರದೇಶ ಮೂಲದ ಇಪ್ತಿಕಾರ್ ಅಹಮ್ಮದ್ (31) ಎಂಬಾತನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಈತನನ್ನು ಬಾಡಿ ವಾರೆಂಟ್ ಮೂಲಕ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ತರಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೀದರ್ ಮೂಲದ ಶಶಿಕಾಂತ್ ದೀಕ್ಷಿತ್ ಎಂಬವರು ತನ್ನಿಂದ 22.5 ಲಕ್ಷ ರೂಪಾಯಿ ಹಣ ಪಡೆದು ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ದೊರಕಿಸುವುದಾಗಿ ನಂಬಿಸಿ ಇಫ್ತಿಕಾರ್ ಅಹ್ಮದ್ ಮತ್ತಿತರರು ಸೇರಿ ಮೋಸ ಮಾಡಿದ್ದಾಗಿ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಮಾರ್ಚ್ 5ರಂದು ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅದೇ ವೇಳೆಗೆ, ಮುಂಬೈನಲ್ಲಿ ಮೆಡಿಕಲ್ ಸೀಟು ಹೆಸರಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಇಫ್ತಿಕಾರ್ ಅಹ್ಮದ್ ಎಂಬಾತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.

ಕಳೆದ ಡಿ .16 ರಂದು ಶಶಿಕಾಂತ್ ದೀಕ್ಷಿತ್ ಅವರನ್ನು ಸಂಪರ್ಕಿಸಿದ ಆರೋಪಿ ಇಫ್ತಿಕಾರ್ ಅಹಮ್ಮದ್ ಹಾಗೂ ಮತ್ತಿತ್ತರರು 50. ಲ.ರೂ ನೀಡಿದಲ್ಲಿ ಮಗ ಉತ್ತಮ್ ದೀಕ್ಷಿತ್ ಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಭರವಸೆ ನೀಡಿದರು. 15 ಲಕ್ಷ ಕ್ಯಾಪಿಟೇಷನ್ ಫೀಸ್ ಹಾಗೂ 7.5 ಲ.ರೂ ಟ್ಯೂಷನ್ ಪೀಸ್ ಎಂದು ತಿಳಿಸಿ ಒಟ್ಟು 22.5 ಲ. ರೂ. ಯನ್ನು ಆರೋಪಿಗಳು ವಸೂಲಿ ಮಾಡಿದ್ದರು.ಉಳಿದ ದಾಖಲಾತಿ ಬಳಿಕ ನೀಡುವಂತೆ ತಿಳಿಸಿದ ಅವರು ಜನವರಿ ತಿಂಗಳ ಮೊದಲ ವಾರದಲ್ಲಿ ಮಗನ ಎಡ್ಮಿಷನ್ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಆಗುವುದಾಗಿಯೂ ತಿಳಿಸಿದ್ದರು.
ಇದೀಗ ಉಳ್ಳಾಲ ಪೊಲೀಸರು ಆರೋಪಿ ಇಫ್ತಿಕಾರ್ ಅಹ್ಮದ್ ನನ್ನು ಬಾಡಿ ವಾರೆಂಟ್ ಪಡೆದು ಮುಂಬೈನಿಂದ ಮಂಗಳೂರಿಗೆ ಕರೆತಂದಿದ್ದಾರೆ. ಶಶಿಕಾಂತ್ ದೀಕ್ಷಿತ್ ಅವರಿಂದ ಮೆಡಿಕಲ್ ಸೀಟು ಕೊಡಿಸುವ ಹೆಸರಲ್ಲಿ ಹಣ ಪಡೆದಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಇಫ್ತಿಕಾರ್ ಅಹ್ಮದ್ ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೆಂದು ಗುರುತಿಸಲಾಗಿದೆ. ಆರೋಪಿ ಇಫ್ತಿಕಾರ್ ದೇಶಾದ್ಯಂತ ಮೆಡಿಕಲ್ ಸೀಟು ಲಾಬಿಯ ನೆಪದಲ್ಲಿ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಏಜನ್ಸಿ ಹೆಸರಲ್ಲಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಕಣಚೂರು ಮೆಡಿಕಲ್ ಕಾಲೇಜು ಹೆಸರಲ್ಲಿ ವಿಶಾಖಪಟ್ಟಣ ಮೂಲದ ಮತ್ತೊಬ್ಬ ವ್ಯಕ್ತಿಗೂ ಇದೇ ರೀತಿ ಮೋಸ ಮಾಡಲಾಗಿತ್ತು. ಮೆಡಿಕಲ್ ಸೀಟು ಕೊಡಿಸುತ್ತೇವೆಂದು 50 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದಿನ್ನೂ ಪತ್ತೆಯಾಗಿಲ್ಲ.
Discover more from Coastal Times Kannada
Subscribe to get the latest posts sent to your email.








Discussion about this post