ಉಳ್ಳಾಲ: ಉಳ್ಳಾಲದ ಸಮುದ್ರ ತೀರ ಪ್ರದೇಶಗಳಲ್ಲಿ ಪ್ರತೀ ವರುಷವೂ ಕಡಳ್ಕೊರೆತ ತೀವ್ರಗೊಳ್ಳಲು ಕಾಂಡ್ಲಾ ವನ ಮತ್ತು ಗಾಳಿ ಮರಗಳ ವಿನಾಶವೇ ಕಾರಣ.ಕಾಂಡ್ಲಾ ವನ ನಶಿಸಿರುವುದರಿಂದ ಸಮುದ್ರದಲ್ಲಿ ಬೆಳೆಯುವ ಜಲಚರಗಳು ಸಂಕಷ್ಟ ಅನುಭವಿಸುತ್ತಿದೆ. ಜಿಲ್ಲೆಯ ಜನರು ಸರಕಾರ ಹಾಗೂ ಅರಣ್ಯ ಇಲಾಖೆಯ ಕಿವಿ ಹಿಂಡಿ ಕಾಂಡ್ಲ ವನ ಹಾಗೂ ಗಾಳಿಮರಗಳನ್ನು ಬೆಳೆಸಬೇಕಿದೆ. ಇಲ್ಲದೇ ಹೋದಲ್ಲಿ ಹವಾಮಾನ ವೈಪರೀತ್ಯಕ್ಕೆ 2040ನೇ ಇಸವಿಯಲ್ಲಿ ಕರಾವಳಿಯ ಉಳ್ಳಾಲ ಮತ್ತು ಮಂಗಳೂರು ಪ್ರದೇಶಗಳು ಸಮುದ್ರ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ನಿವೃತ್ತ ವೈಜ್ಞಾನಿಕ ಅಧಿಕಾರಿ ಡಾ. ದೊಡ್ಡ ಅಶ್ವಥ್ ನಾರಾಯಣಸ್ವಾಮಿ ಬೆಂಗಳೂರು ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟುವಿನ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ ‘ತಿಂಗಳ ಬೆಳಕು-ಗೌರವ ಅತಿಥಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಮಾಧ್ಯಮದ ಜೊತೆಗಿನ ಸಂವಾದದಲ್ಲಿ ಅವರು ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
1993ರಲ್ಲಿ ಸಿಆರ್ ಝೆಡ್ ನಕ್ಷೆ ತಯಾರಿ ಸಂದರ್ಭ ಉಳ್ಳಾಲದಿಂದ ತಲಪಾಡಿವರೆಗೂ ಕಾಂಡ್ಲಾ ವನಗಳ ರಾಶಿಯೇ ಇತ್ತು. ಆದರೆ ಅದನ್ನು ಕಡಿದ ಪರಿಣಾಮ ಕಡಲ್ಕೊರೆತ ವ್ಯಾಪಕವಾಗಿ ಜನವಸತಿ ಪ್ರದೇಶಗಳನ್ನು ನುಂಗಿದೆ. ಶ್ರೀಲಂಕಾ, ಸಿಂಗಾಪುರ, ವಿಯೆಟ್ನಾಂ ಸೇರಿದಂತೆ ಕೇರಳದಲ್ಲಿಯೂ ಕಾಂಡ್ಲ ವನ ವ್ಯಾಪಕವಾಗಿ ಬೆಳೆಸಲು ಸರಕಾರ ಪ್ರೋತ್ಸಾಹಿಸು ತ್ತಿದೆ. ಆದರೆ ದ.ಕ.ದಲ್ಲಿ ಕಾಂಡ್ಲ ಗಿಡಗಳು ಸಂಪೂರ್ಣ ನಶಿಸಿಹೋಗಿದೆ. ಉಳ್ಳಾಲ ಪ್ರೆಸ್ ಕ್ಲಬ್ ಎದುರು ನಿಂತು ಉಳ್ಳಾಲ ದಿಂದ- ಬಟ್ಟಪ್ಪಾಡಿ ಸಮುದ್ರ ತೀರದ ವರದಿಯನ್ನು ನೀಡಿ ಪ್ರಯೋಗಾರ್ಥ ಕಾಂಡ್ಲಾ ವನ ಬೆಳೆಸುವಂತೆ ಒತ್ತಾಯಿಸ ಬೇಕಿದೆ. ಪರಿಸರ ವಿಚಾರಗಳ ಅರ್ಥೈಸಿದ ಧೀರ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ. 1981 ರಲ್ಲಿ ನಶಿಸುವ ಹಂತದಲ್ಲಿದ್ದ ಒಂದು ಕಾಲಿನ ಏಡಿಗಳ ಸಂತತಿಯನ್ನು ಬೆಳೆಸುವುದು ಹಾಗೂ ಉಳಿಸುವ ಕಲ್ಪನೆಯನ್ನು ಹೊಂದಿದ್ದರು. ಕಡಲತೀರ ಸಂರಕ್ಷಣೆಯ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿ ಕಡಲತೀರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಂರಕ್ಷಣಾ ಕ್ರಮಗಳಿಗೆ ಒತ್ತಾಯಿಸಿದ ಪತ್ರ ಕಳುಹಿಸಿರುವ ಸಾಕ್ಷಿಯಿದೆ. ದೇಶದುದ್ದಕ್ಕೂ ಪರಿಸರ ವ್ಯವಸ್ಥಾಪನಾ ಯೋಜನೆ ತಯಾರಿ ಸಬೇಕು ಅನ್ನುವ ಕೇಂದ್ರ ಸರಕಾರ ಅಧಿಸೂಚನೆಯನ್ನು ಪಾಲಿಸದ ಸಂದರ್ಭ, ಸರ್ವೋಚ್ಛ ನ್ಯಾಯಾಲಯ 1991ರಲ್ಲಿ ಪ್ರಶ್ನಿಸಿ, ರಾಜ್ಯಗಳಿಗೆ ನಿರ್ದೇಶಿಸುವಂತೆ ಆದೇಶಿಸಿತ್ತು. ಈ ಆದೇಶದಂತೆ 1993ರಲ್ಲಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಯವರು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ , ಕಾರವಾರ ಸಮುದ್ರತೀರದಲ್ಲಿ 21 ಮಧ್ಯಸ್ಥಿಕೆಗಳನ್ನು ಅನುಷ್ಠಾನಕ್ಕೆ ಮುಂದಾ ದರು. ಅದಕ್ಕಾಗಿ ಡೆನ್ಮಾರ್ಕ್ ಸರಕಾರದಿಂದ ಧನಸಹಾಯಕ್ಕೆ ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ 2 ವರ್ಷಗಳ ಕಾಲ ರಾಜ್ಯದ ಸಮುದ್ರತೀರದ ಪ್ರದೇಶಗಳಲ್ಲಿ ಅಧ್ಯಯನಕ್ಕೆ ಸರಕಾರ ನಿಯೋಗ ರಚಿಸಿತ್ತು. ನಿಯೋಗದ ವರದಿಗಳಲ್ಲಿ ರಾಜ್ಯದಲ್ಲಿ ರುವ ಕಡಲತೀರದ ಸಂಪನ್ಮೂಲಗಳು ಬೇರೆ ಎಲ್ಲಿಯೂ ಇಲ್ಲ. ಏರುಬ್ಬರ, ಇಳಿಯುಬ್ಬರ ರೇಖೆಗಳನ್ನು ಗುರುತಿಸಿ ಸಿಆರ್ ಝೆಡ್ -1 ಹಾಗೂ 2 ವಲಯದ ನಕ್ಷೆಗಳನ್ನು ಅಂದು ತಯಾರಿಸಲಾಗಿತ್ತು. ನಕ್ಷೆ ತಯಾರಿಸುವ ಸಂದರ್ಭ ಉಳ್ಳಾಲದಿಂದ ತಲಪಾಡಿವರೆಗೂ ಕಾಂಡ್ಲ ವನ ತುಂಬಿತ್ತು ಎಂಬುದು ದಾಖಲೆಗಳಲ್ಲಿ ಉಲ್ಲೇಖವಿದೆ. ಆದರೆ ಕಾಲಕ್ರಮೇಣ ಕಾಂಡ್ಲವನಗಳನ್ನು ಕಡಿದ ಪರಿಣಾಮವಾಗಿ ಉಳ್ಳಾಲದಿಂದ ತಲಪಾಡಿಯವರೆಗೂ ಕಡಲ್ಕೊರೆತ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಪ್ರಕೃತಿ ವಿರುದ್ಧ ಚಟುವಟಿಕೆಗಳು ನಡೆದಾಗ ಪ್ರಕೃತಿ ಮುನಿದಿರುವುದಕ್ಕೆ ಉಳ್ಳಾಲ ಉದಾಹರಣೆ. ಕಾಂಡ್ಲಾ ವನ ಇರುತ್ತಿದ್ದರೆ ಉಳ್ಳಾಲದಲ್ಲಿ ಮನೆಗಳ, ಕಟ್ಟಡಗಳ ಹಾನಿ ನಡೆಯುತ್ತಿರಲಿಲ್ಲ. ಇದಕ್ಕೆ ವಿಯೆಟ್ನಂ, ಸಿಂಗಪುರದಲ್ಲಿನ ಸಮುದ್ರ ತೀರಗಳೇ ಉದಾಹರಣೆಗಳಾಗಿವೆ. ಇನ್ನೊಂದು ಕಡೆ ಮರಳು ಗಣಿಗಾರಿಕೆಯೂ ವ್ಯಾಪಕವಾಗಿ ಉಳ್ಳಾಲದಲ್ಲಿ ಕರ‍್ಯಾಚರಿಸು ವುದರಿಂದ ಕಡಲ್ಕೊರೆತಕ್ಕೆ ಸುಲಭದ ಹಾದಿಯನ್ನು ಮಾಡಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮೆಸ್ಕಾಂ ಕಿರಿಯ ಅಭಿಯಂತರ ನಿತೇಶ್ ಹೊಸಗದ್ದೆ ಮಾತನಾಡಿ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘ ಇಲಾಖೆಯ ಪ್ರತಿಯೊಂದು ಕಾರ್ಯಗಳಲ್ಲಿ ಉತ್ತಮವಾಗಿ ಕೈಜೋಡಿಸುತ್ತಿದ್ದು, ಇಲಾಖೆಯೂ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದೆ. ಭವಿಷ್ಯದಲ್ಲಿ ಜನಪರ ಕಾರ್ಯಕ್ರಮಗಳನ್ನು ಪ್ರೆಸ್ ಕ್ಲಬ್ ನಡೆಸುವಂತಾಗಲಿ ಎಂದರು.
ಈ ಸಂದರ್ಭ ಉಳ್ಳಾಲ ಪ್ರೆಸ್ ಕ್ಲಬ್ ಅಧ್ಯಕ್ಷ ವಸಂತ್ ಎನ್.ಕೊಣಾಜೆ, ಉಪಾಧ್ಯಕ್ಷರುಗಳಾದ ದಿನೇಶ್ ನಾಯಕ್, ಆರೀಫ್ ಕಲ್ಕಟ್ಟ, ಗ್ಯಾನ್ ವೇದಾಂತ್ ಫೌಂಡೇಷನ್ ಇದರ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸೂರಿಂಜೆ, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಕರ‍್ಯದರ್ಶಿ ವಜ್ರ ಗುಜರನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಿವಶಂಕರ್, ಆಸೀಫ್ ಬಬ್ಬುಕಟ್ಟೆ, ಅಶ್ವಿನ್ ಕುತ್ತಾರ್, ಉಪನ್ಯಾಸಕ ಅಭಿಷೇಕ್, ಜಿಲ್ಲಾ ಕರ‍್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರ್ ಉಪಸ್ಥಿತರಿದ್ದರು. ಪ್ರಧಾನ ಕರ‍್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ನಿರೂಪಿಸಿದರು. ಕರ‍್ಯದರ್ಶಿ ಸತೀಶ್ ಕೊಣಾಜೆ ವಂದಿಸಿದರು. ಕಾರ್ಯಕ್ರಮ ದಲ್ಲಿ ದಯಾನಂದ ಪೈ-ಸತೀಶ್ ಪೈ ಪ್ರಥಮ ದರ್ಜೆ ಕಾಲೇಜು ಕಾರ್ ಸ್ಟೀಟ್ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post