ಮಂಗಳೂರು, ಜೂನ್ 2: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಬೆನ್ನಲ್ಲೇ ಇದೀಗ ಪೊಲೀಸರು ಹಿಂದೂ ಮುಖಂಡರ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ವಿರುದ್ಧ ಕಠಿಣ ಕ್ರಮ ಆರಂಭಿಸಿದ್ದಾರೆ. ಪೊಲೀಸರು ಮತ್ತು ಗೃಹ ಇಲಾಖೆಯ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬದಲಾವಣೆಗೆ ಆಗ್ರಹಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿದೆ. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿ 15 ಮಂದಿ ಕಾರ್ಯಕರ್ತರ ವಿರುದ್ಧ ಎಫ್ಎಆರ್ ದಾಖಲಾದ ಬೆನ್ನಲ್ಲೇ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಗಡೀಪಾರು ನೋಟಿಸ್ ನೀಡಲಾಗಿದೆ. ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ಗಡೀಪಾರು ನೋಟಿಸ್ ಜಾರಿ ಮಾಡಿದ್ದಾರೆ.
ಕರ್ನಾಟಕ ಪೊಲೀಸು ಅಧಿನಿಯಮ, 1963 ಕಲಂ: 58 ರಡಿ ನೋಟೀಸ್ ಜಾರಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ನೋಟಿಸ್ನಲ್ಲಿ ಆದೇಶಿಸಲಾಗಿದೆ.
ಗಡಿಪಾರು ನೋಟಿಸ್ನಲ್ಲೇನಿದೆ? : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕೃಷ್ಣಯ್ಯ ಎಂಬವರ ಮಗ ಆರುಣ್ ಕುಮಾರ್ ಪುತ್ತಿಲ ಎಂಬಾತನ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 55 ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಯನ್ನು ದಿನಾಂಕ: 06-06-2025 ರಂದು ನಿಗದಿಪಡಿಸಲಾಗಿದೆ. ಸದ್ರಿ ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ನೀಡಿರುವ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ನೀವು (ಪುತ್ತಿಲ) ಸ್ವತಃ ಯಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದೆಂದು ಈ ಮೂಲಕ ನಿಮಗೆ ತಿಳಿಸಲಾಗಿದೆ. ತಪ್ಪಿದಲ್ಲಿ ಸದರಿ ಪ್ರಕರಣದಲ್ಲಿ ನಿಮಗೆ ಆಸಕ್ತಿ ಇಲ್ಲವೇಂದು ಭಾವಿಸಿ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷಿಯವಾಗಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಹ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಭಾಷಣ ಮಾಡುವವರ ಹಾಗೂ ಕೋಮು ಪ್ರಚೋದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಖಡನ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಹಿಂದು ಮುಖಂಡರ ವಿರುದ್ಧ ಕ್ರಮ ಆರಂಭವಾಗಿದೆ. ಆದರೆ, ಅರುಣ್ ಪುತ್ತಿಲಗೆ ಯಾವ ಕಾರಣಕ್ಕೆ ಗಡಿಪಾರು ನೋಟಿಸ್ ನೀಡಲಾಗಿದೆ ಎಂಬುದನ್ನು ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ನೋಟಿಸ್ನಲ್ಲಿ ಉಲ್ಲೇಖಿಸಿಲ್ಲ.
Discover more from Coastal Times Kannada
Subscribe to get the latest posts sent to your email.
Discussion about this post