ಬೆಂಗಳೂರು: ‘ಬರುವ ಆಗಸ್ಟ್‌ನಲ್ಲಿ ಪಂಚರತ್ನ ರಥಯಾತ್ರೆ ಆರಂಭಿಸಿ ಹಳ್ಳಿ –ಹಳ್ಳಿಗೆ ಹೋಗುತ್ತೇನೆ. ಮೂರು ತಿಂಗಳು ಬೆಂಗಳೂರಿಗೆ ಬರುವುದಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಜೆ.ಪಿ. ಭವನದ ಬಳಿ ಆಯೋಜಿಸಿದ್ದ ಜನತಾಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಹದಿನೈದು ದಿನ ಬೆಂಗಳೂರಿಗೆ ಮೀಸಲಿಟ್ಟಿದ್ದೇನೆ. ಎಲ್ಲೆಡೆ ಜನತಾ ಮಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ಬೆಂಗಳೂರು ನಗರದ ಕಾರ್ಯಕರ್ತರ ಸಮಾವೇಶವನ್ನು ಜುಲೈ 17 ರಂದು ನಡೆಸಲಾಗುವುದು. ಸುಮಾರು ಒಂದೂವರೆ ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.
‘ಬೆಂಗಳೂರಿಗೆ ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿದ್ದೇನೆ. ಜೆಡಿಎಸ್ ಪರ ಒಲವು ಹೊಂದಿರುವ ಮತದಾರರು ಇದ್ದಾರೆ. ಅವರನ್ನು ಭೇಟಿಯಾಗಿ ಪಕ್ಷದ ಕಾರ್ಯಕ್ರಮಗಳು ಮತ್ತು ಉದ್ದೇಶಗಳನ್ನು ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಬೆಂಗಳೂರು ನಗರದಿಂದಲೇ ಕನಿಷ್ಠ 17 ಶಾಸಕರು ಜೆಡಿಎಸ್‌ನಿಂದ ಚುನಾಯಿತರಾಗಲಿದ್ದಾರೆ’ ಎಂದು ಹೇಳಿದರು. ‘ಎರಡೂ ರಾಷ್ಟ್ರೀಯ ಪಕ್ಷಗಳೂ ಜನರಿಗೆ ಮೋಸ ಮಾಡಿವೆ. ರಾಜ್ಯದ ತೆರಿಗೆಯಲ್ಲಿ ಸಂಬಳ ಪಡೆಯುವ ಐಎಎಸ್ ಅಧಿಕಾರಿಗಳು ಬಂಡವಾಳ ಹೂಡಿಕೆದಾರರಿಗೆ ಗುಜರಾತ್‌ಗೆ ಕಳುಹಿಸುತ್ತಿದ್ದಾರೆ. ಚುನಾವಣೆ ಸಮೀಪ ಬಂದಾಗ ಎಲ್ಲವನ್ನೂ ವಿವರವಾಗಿ ಮಾತನಾಡುತ್ತೇನೆ. ಡಿಸೆಂಬರ್‌ನಲ್ಲಿ ಚುನಾವಣೆ ಬರುವ ಸಾಧ್ಯತೆಗಳು ಇವೆ’ ಎಂದರು.
‘ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಮತಗಳಿವೆ. ಕಾರ್ಯಕರ್ತರು ಇದನ್ನು ಮರೆಯಬಾರದು. ಅಧಿಕಾರ ಇದ್ದಾಗ ನಾವು ಅಕ್ರಮವಾಗಿ ಹಣ ಮಾಡಿಲ್ಲ. ಮೂವರು ಶಾಸಕರು ನಮ್ಮ ಪಕ್ಷದವರಿದ್ದರು. ಅವರೂ ಬೇರೆ ಕಡೆ ಹೋಗಿದ್ದಾರೆ. ಚಾಮರಾಜಪೇಟೆಯಲ್ಲಿ ನಮ್ಮ ನಾಯಕರು ಹೋರಾಟ ಮಾಡಿದರು. ಅದರಿಂದಾಗಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮಿ ಲೇಔಟ್ ಗಳಲ್ಲೂ ಗೆದ್ದೆವು. ಪಕ್ಷ ಉಳಿದರೆ ನಾವೆಲ್ಲಾ ಉಳಿಯುತ್ತೇವೆ ಎಂಬುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
Discover more from Coastal Times Kannada
Subscribe to get the latest posts sent to your email.








Discussion about this post