ಮಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರು ರಾಜ್ಯದಾದ್ಯಂತ ಅರಂಭಿಸಿರುವ ಮುಷ್ಕರದ ಪರಿಣಾಮ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ಶುಕ್ರವಾರ ಅಸ್ತವ್ಯಸ್ತಗೊಂಡಿದೆ. ಸಫಾಯಿ ಕರ್ಮಚಾರಿ ಸಂಘದ ಕರಾವಳಿ ವಿಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರಕಾರ್ಮಿಕರ, ನಾಲ್ಕನೇ ದರ್ಜೆ ನೌಕರರ ಸಂಘದ ಆಶ್ರಯದಲ್ಲಿ ಮುಷ್ಕರ ನಡೆಯುತ್ತಿದೆ. ಕಸ ಸಾಗಾಟ, ನೀರು ನಿರ್ವಹಣೆ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆಯಿಂದ ಧರಣಿ ನಡೆಸಿದರು. ಈ ನಡುವೆ ಮುಷ್ಕರದ ವಿಷಯ ತಿಳಿಯದೇ ಇದ್ದ ಬಹುತೇಕರು ತ್ಯಾಜ್ಯವನ್ನು ಮನೆ ಮುಂದೆ ಇರಿಸಿದ್ದರು. ಅದನ್ನು ಸಾಗಿಸದ ಕಾರಣ ಅಲ್ಲೇ ಉಳಿದಿತ್ತು. ಕೆಲವರು ನಂತರ ಅದನ್ನು ವಾಪಸ್ ತೆಗೆದುಕೊಂಡು ಹೋದರು. ಇನ್ನು ಕೆಲವರು ಅಲ್ಲೇ ಬಿಟ್ಟಿದ್ದ ಕಾರಣ ನಾಯಿಗಳು ಎಳೆದು ರಸ್ತೆಗೆ ಚೆಲ್ಲಿದವು. ಕಸದ ಮೇಲೆ ಮಳೆಯೂ ಬಿದ್ದು ಇನ್ನಷ್ಟು ಸಮಸ್ಯೆ ಉಂಟಾಯಿತು.
ನಗರದಲ್ಲಿ ಪ್ರತಿ ಶುಕ್ರವಾರ ಒಣ ಕಸ ಸಂಗ್ರಹ ಮಾಡಲಾಗುತ್ತದೆ. ಮುಷ್ಕರ ನಡೆಯಲಿರುವುದರಿಂದ ಅನೇಕ ಬಡಾವಣೆಗಳಲ್ಲಿ ಪೌರಕಾರ್ಮಿಕರು ಗುರುವಾರವೇ ಅದನ್ನು ಸಂಗ್ರಹಿಸಿದ್ದಾರೆ. ಕೆಲವರಿಗೆ ಮುಷ್ಕರದ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ. ಕೆಲವರು ಮಾಹಿತಿ ಇದ್ದರೂ ಕಸವನ್ನು ಹೊರಗೆ ಇರಿಸಿದ್ದಾರೆ. ಇನ್ನು ಕೆಲವರು ಕಸವನ್ನು ಚರಂಡಿಗೆ ಎಸೆಯುತ್ತಿದ್ದುದು ಕಂಡುಬಂತು. ಬುಧವಾರ ಧಾರಾಕಾರ ಮಳೆಯಾದ ಕಾರಣ ಅನೇಕ ಬಡಾವಣೆಗಳ ಚರಂಡಿ ಮತ್ತು ತೋಡುಗಳಲ್ಲಿ ನೀರು ಹರಿಯುತ್ತಿದೆ. ಅದರಲ್ಲೂ ಕಸವನ್ನು ಚೆಲ್ಲುತ್ತಿರುವುದು ಕಂಡುಬಂತು.
ಸಮಯಕ್ಕೆ ಸರಿಯಾಗಿ ವೇತನ ನೀಡಬೇಕು, ಕಾರ್ಮಿಕರ ಬೋನಸ್ ವಿತರಿಸಬೇಕು, ಮಹಿಳಾ ಕಾರ್ಮಿಕರಿಗೆ ಬಟ್ಟೆ ಬದಲಾಯಿಸಲು ವ್ಯವಸ್ಥೆ ಕಲ್ಪಿಸಬೇಕು, ಘನತ್ಯಾಜ್ಯ ವಾಹನಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು, ಚಾಲಕರ ವೇತನ ಪರಿಷ್ಕರಿಸಬೇಕು, ಕಾರ್ಮಿಕರ ಭವಿಷ್ಯನಿಧಿ ಖಾತೆ ಸರಿಯಾಗಿ ನಿರ್ವಹಿಸಬೇಕು, ನಿಗದಿತ ಸಮಯಕ್ಕಿಂತ ಹೆಚ್ಚು ದುಡಿಸಬಾರದು, ವಾರದ ರಜೆ ನೀಡದೆ ಸತಾಯಿಸಬಾರದು ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕರು ಆಗ್ರಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post