ಮಂಗಳೂರು, ಅ.1 : ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ನಗರದ ಕರಾವಳಿ ಉತ್ಸವದಲ್ಲಿ ನಡೆಯುತ್ತಿರುವ ಹತ್ತನೇ ವರ್ಷದ ಪಿಲಿನಲಿಕೆ ಸ್ಪರ್ಧಾ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು ಮತ್ತು ಭಾರೀ ಸಂಖ್ಯೆಯ ಜನರು ಸೇರಿದ್ದಾರೆ. ಮತ ಭೇದ ಇಲ್ಲದೆ ಜನರು ಆಗಮಿಸಿದ್ದು ಬಂದು ಸೇರಿದ್ದು ವಿಶೇಷ.
ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಮೊದಲ ಬಾರಿಗೆ ಪಿಲಿನಲಿಕೆ ಉತ್ಸವಕ್ಕೆ ಬಂದಿದ್ದು ಇಷ್ಟೊಂದು ಜನ ಸೇರ್ತಾರೆ, ಹುಲಿ ವೇಷದಲ್ಲಿ ಇಂಥದ್ದೊಂದು ಕಾರ್ಯಕ್ರಮ ಆಗುತ್ತೆ ಎಂದು ತಿಳಿದಿರಲಿಲ್ಲ. ಹುಲಿ ವೇಷ ನೋಡಲು ಬಂದಿದ್ದು ನನಗೂ ಖುಷಿಯಾಯ್ತು ಎಂದು ಹೇಳಿದರು. ಸುದೀಪ್ ಕೆಲಹೊತ್ತು ಕಾರ್ಯಕ್ರಮದಲ್ಲಿದ್ದು ಬಳಿಕ ನಿರ್ಗಮಿಸಿದರು.
ಬಾಲಿವುಡ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸುನಿಲ್ ಶೆಟ್ಟಿ ಪ್ರತಿ ವರ್ಷವೂ ಪಿಲಿನಲಿಕೆ ಉತ್ಸವಕ್ಕೆ ಬರುತ್ತಿದ್ದು ತುಳುನಾಡಿನ ಜನಪದ ಸ್ಪರ್ಧೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ, ಕನ್ನಡ ಚಿತ್ರರಂಗದ ಭರವಸೆಯ ಕಲಾವಿದ ಝಾಯೇದ್ ಖಾನ್ ಆಗಮಿಸಿದ್ದರು. ಸುನಿಲ್ ಶೆಟ್ಟಿ ಜೊತೆಗೆ ವೇದಿಕೆಯಲ್ಲಿ ಕುಳಿತು ಹುಲಿವೇಷಗಳ ಕುಣಿತ ವೀಕ್ಷಿಸಿದರು. ಅದ್ದೂರಿ ಕುಣಿತ, ಸಣ್ಣ ಮರಿ ಹುಲಿಯ ಚಾಲಾಕಿತನಕ್ಕೆ ಮನಸೋತ ಝಾಯೇದ್ ಖಾನ್, ವೇದಿಕೆಯಿಂದಲೇ ತನ್ನ ವೈಯಕ್ತಿಕ ನೆಲೆಯಲ್ಲಿ ಎರಡು ಲಕ್ಷ ಬಹುಮಾನ ಘೋಷಿಸಿದರು. ಅಲ್ಲದೆ, ಮರಿ ಹುಲಿ ಹಾಕಿದ ಕಲಾವಿದನಿಗೆ 50 ಸಾವಿರ ತನ್ನ ಕಿರು ಕಾಣಿಕೆ ಎಂದು ಹೇಳಿ ಕಲಾವಿದರನ್ನು ಹುರಿದುಂಬಿಸಿದರು.
ಮಂಗಳೂರು ಮೂಲದ ಬಾಲಿವುಡ್ ನಟಿ ಪೂಜಾ ಹೆಗ್ಡೆ ತುಳುವಿನಲ್ಲೇ ಮಾತನಾಡಿ, ಹುಲಿ ವೇಷದ ಬಗ್ಗೆ ತನ್ನ ಪ್ರೀತಿಯನ್ನು ಹೇಳಿಕೊಂಡರು. ಸು ಫ್ರಂ ಸೋ ಖ್ಯಾತಿಯ ರಾಜ್ ಬಿ ಶೆಟ್ಟಿ, ನಿರ್ದೇಶಕ ಜೆಪಿ ತುಮ್ಮಿನಾಡು ಆಗಮಿಸಿದ್ದರು. ತುಳುನಾಡಿನ ಜನಪದಕ್ಕೆ ನಾವು ತಲೆ ತಗ್ಗಿಸಬೇಕು. ಇಲ್ಲಿ ಜನ ಸೇರಿದ್ದು ಯಾವುದೇ ಸಿನಿಮಾ ನಟರನ್ನು ನೋಡಲು ಅಲ್ಲ. ಹುಲಿಗಳನ್ನು ನೋಡಲು ಬಂದಿದ್ದಾರೆ. ನಮ್ಮ ಸಂಸ್ಕೃತಿಗೆ ಪೆಟ್ಟು ಬಿದ್ದಿದೆ ಅಂತಾರೆ, ಆದರೆ ವರ್ಷದಿಂದ ವರ್ಷಕ್ಕೆ ನಮ್ಮ ಸಂಸ್ಕೃತಿ ಜಗತ್ತಿನೆತ್ತರಕ್ಕೆ ಏರುತ್ತಿದೆ ಎಂದರು.
ಕ್ರಿಕೆಟ್ ತಾರೆ ಅಜಿಂಕ್ಯ ರಹಾನೆ ಸಂಜೆ ವೇಳೆಗೆ ಬೇಗ ಬಂದು ಹೋದರೆ, ಆರ್ ಸಿಬಿ ತಂಡದ ಜಯೇಶ್ ಶರ್ಮಾ. ಅವರಿಬ್ಬರೂ ಇಲ್ಲಿನ ಜನಪದ ಕಲೆಯಾದ ಹುಲಿವೇಷಗಳನ್ನು ತದೇಕ ಚಿತ್ತದಿಂದ ನೋಡುತ್ತಲೆ ಇದ್ದರು.
ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಎಂ.ಎನ್. ರಾಜೇಂದ್ರ ಕುಮಾರ್, ರಮಾನಾಥ ರೈ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post