ಧರ್ಮಸ್ಥಳ : ಕಾಂತಾರ ಚಲನಚಿತ್ರದ ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಬುಧವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಡಿ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ವೀರೇಂದ್ರ ಹೆಗ್ಗಡೆ ಕುಟುಂಬ ಸಮೇತರಾಗಿ ಇತ್ತೀಚೆಗೆ ಮಂಗಳೂರಿನಲ್ಲಿ “ಕಾಂತಾರ” ಚಲನಚಿತ್ರ ನೋಡಿದ್ದು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದರು. ಹೆಗ್ಗಡೆಯವರು ರಿಷಬ್ ಶೆಟ್ಟಿ ದಂಪತಿಯನ್ನು ಗೌರವಿಸಿ ಅಭಿನಂದಿಸಿದರು. ನಟ ಪ್ರಮೋದ್ ಶೆಟ್ಟಿ ಕೂಡಾ ಉಪಸ್ಥಿತರಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಿನಿಮಾ ತಯಾರಿ ಮೊದಲೆ ಧರ್ಮಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿ, ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದೆ. ಕಾಂತಾರದ ದೈವಾರಾಧನೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ.ಹೆಗ್ಗಡೆಯವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆ ದೇವರೇ ಸಿನಿಮಾ ನೋಡಿ ಆಶೀರ್ವದಿಸಿದಂತಾಗಿದೆ ಎಂದು ಹೇಳಿದ ರಿಷಬ್ ಶೆಟ್ಟಿ, ಎಲ್ಲ ಕಡೆಗಳಲ್ಲಿ ಎರಡು ತಿಂಗಳಿಗೂ ಮಿಕ್ಕಿ ಜನರು ಚಲನಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಹಿಂದಿ, ತುಳು ಹಾಗೂ ಇತರ ಭಾಷೆಗಳಲ್ಲಿಯೂ ಸದ್ಯದಲ್ಲಿಯೇ ಕಾಂತಾರ ಪ್ರದರ್ಶನವಾಗಲಿದೆ ಎಂದು ಅವರು ಹೇಳಿದರು. ಪತ್ನಿ ಪ್ರಗತಿ ಶೆಟ್ಟಿ ಮಾತನಾಡಿ ಇನ್ನು ಎರಡು ತಿಂಗಳು ತೀರ್ಥಯಾತ್ರೆ ಮಾಡುವ ಕಾರ್ಯಕ್ರಮವಿದ್ದು ಬಳಿಕ ಕೊಂಚ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post