ಮಂಗಳೂರು: ಅಡ್ಯಾರ್ ಕಣ್ಣೂರು ವ್ಯಾಪ್ತಿಯ ಹಜರತ್ ಯೂಸುಫ್ ಸಿದ್ದೀಕ್ ವಲಿಯುಲ್ಲಾಹಿ ದರ್ಗಾ ಅಧೀನದಲ್ಲಿರುವ ನಡುಪಳ್ಳಿ ದರ್ಗಾದಲ್ಲಿ ಎರಡು ದಿನಗಳ ವಾರ್ಷಿಕ ಉರುಸ್ ನಡೆಯುತ್ತಿದೆ. ಈ ದರ್ಗಾ ಸುಮಾರು 400 ವರ್ಷಗಳಷ್ಟು ಹಳೆಯದಾಗಿದ್ದು, ನೇತ್ರಾವತಿ ನದಿಯ ಮಧ್ಯದಲ್ಲಿದೆ. ಈ ದರ್ಗಾಕ್ಕೆ ಭಕ್ತರು ಸುಲಭವಾಗಿ ತಲುಪುವಂತೆ ಸ್ಥಳೀಯರು 52 ದೋಣಿಗಳನ್ನು ಜೋಡಿಸಿ ತಾತ್ಕಾಲಿಕ ‘ದೋಣಿ ಸೇತುವೆ’ ನಿರ್ಮಿಸಿರುವುದು ಈ ಉರುಸ್‌ನ ಪ್ರಮುಖ ಆಕರ್ಷಣೆಯಾಗಿದೆ. ಶತಮಾನಗಳಿಂದ ಜನರು ತಮ್ಮ ಸಮಸ್ಯೆಗಳಿಗೆ, ಅದು ಅನಾರೋಗ್ಯ ಅಥವಾ ನಷ್ಟವಾಗಿದ್ದರೂ, ಸಾಂತ್ವನ ಮತ್ತು ಪರಿಹಾರಗಳನ್ನು ಪಡೆಯಲು ದರ್ಗಾಕ್ಕೆ ಬರುತ್ತಿದ್ದಾರೆ.

52 ದೋಣಿಗಳನ್ನು ಜೋಡಿಸಿ ತಾತ್ಕಾಲಿಕ ‘ದೋಣಿ ಸೇತುವೆ’: ನದಿತೀರ ಮತ್ತು ದರ್ಗಾ ಇರುವ ಸಣ್ಣ ಗುಡ್ಡದ ನಡುವಿನ ನೀರಿನಲ್ಲಿ ಸುಮಾರು ಐವತ್ತೆರಡು ದೋಣಿಗಳನ್ನು ಸಾಲಾಗಿ ನಿಲ್ಲಿಸಿ, ಅವುಗಳನ್ನು ಎರಡೂ ಬದಿಯಿಂದ ಹಗ್ಗ ಹಾಗೂ ಬೋಲ್ಟ್‌ಗಳಿಂದ ಬಿಗಿಯಾಗಿ ಕಟ್ಟಲಾಗಿದೆ. ಪ್ರತಿ ದೋಣಿಯ ಮೇಲೂ ಮರದ ಹಲಗೆಗಳನ್ನು ಅಡ್ಡವಾಗಿ ಹಾಕಿ, ಕಬ್ಬಿನ ಪಟ್ಟಿಯಿಂದ ಭದ್ರಪಡಿಸಲಾಗಿದೆ. ಈ ಸೇತುವೆ ಸುರಕ್ಷಿತವಾಗಿರಲೆಂದು ಉರೂಸ್ ಸಂದರ್ಭದಲ್ಲಿ ಇಬ್ಬರು ಅನುಭವಿಗಳು ದೋಣಿಯಲ್ಲೇ ಇದ್ದು, ಬೋಲ್ಟ್ ಸಡಿಲವಾದರೆ ತಕ್ಷಣ ಬಿಗಿ ಮಾಡುತ್ತಾರೆ. ಜಮಾತ್ ಸದಸ್ಯರು ಮತ್ತು ಸ್ವಯಂ ಸೇವಕರು ಎರಡೂ ಬದಿಯಲ್ಲಿ ನಿಂತು ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ.


ಈ ದರ್ಗಾ ಸುಮಾರು 400 ವರ್ಷಗಳಷ್ಟು ಹಳೆಯದಾಗಿದ್ದು, ನೇತ್ರಾವತಿ ನದಿಯ ಮಧ್ಯದಲ್ಲಿದೆ. ಈ ವರ್ಷ, 52 ದೋಣಿಗಳನ್ನು ಸಾಲಾಗಿ ನಿಲ್ಲಿಸಲಾಗಿದೆ ಈ ದರ್ಗಾದ ಉರುಸ್‌ನಲ್ಲಿ ಹಿಂದೆ ಯಾವುದೇ ಮಾರ್ಗ ಇರಲಿಲ್ಲ. ಭಕ್ತರು ಸಂಪೂರ್ಣವಾಗಿ ದೋಣಿಯಲ್ಲಿ ಮಾತ್ರ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಕೈಯಲ್ಲಿ ಹಿಡಿದು ದೋಣಿಗೆ ಏರಿಸಿ–ಇಳಿಸುವ ಶ್ರಮ ಹೆಚ್ಚಾಗಿತ್ತು.
ಕಳೆದ ಒಂಬತ್ತು ವರ್ಷಗಳಿಂದ ಈ ತಾತ್ಕಾಲಿಕ ದೋಣಿ ಸೇತುವೆ ನಿರ್ಮಿಸಲಾಗುತ್ತಿದ್ದು, ಸಾವಿರಾರು ಭಕ್ತರು ನಡೆದುಕೊಂಡೇ ದರ್ಗಾ ತಲುಪುತ್ತಿದ್ದಾರೆ. ಮುಸ್ಲಿಂ, ಹಿಂದೂ, ಕ್ರೈಸ್ತ-ಎಲ್ಲ ಸಮುದಾಯದ ಜನರು ಇಲ್ಲಿ ಬಂದು ದುವಾ ಮಾಡಿ, ಬೆಲ್ಲದ ಗಂಜಿ ಪ್ರಸಾದ ಸ್ವೀಕರಿಸುತ್ತಿದ್ದಾರೆ. ಯಾವುದೇ ಜಾತಿ–ಧರ್ಮದ ಭೇದವಿಲ್ಲದೇ ಸಾಮರಸ್ಯದ ವಾತಾವರಣ ಕಂಡುಬರುತ್ತಿದೆ.


ಈ ಧಾರ್ಮಿಕ ಕೇಂದ್ರದ ಮುಖಂಡರಾದ ಅಬ್ದುಲ್ ಸಮಾದ್ ಮಾತನಾಡಿ, “ಈ ದರ್ಗಾ ನಮ್ಮ ನಂಬಿಕೆಯ ಕೇಂದ್ರ ಮಾತ್ರವಲ್ಲ. ಸಮುದಾಯದ ಒಗ್ಗಟ್ಟಿನ ಸಂಕೇತವೂ ಹೌದು. ನದಿ ವಿಸ್ತಾರವಾದರೂ ನಮ್ಮ ಪರಂಪರೆ ನಿಂತಿಲ್ಲ. ದೋಣಿಗಳನ್ನು ಸೇರಿಸಿ ಮಾರ್ಗ ನಿರ್ಮಿಸುವುದು ಕೇವಲ ವ್ಯವಸ್ಥೆ ಅಲ್ಲ, ಇದು ಭಕ್ತರ ಸೇವೆ. ಇಲ್ಲಿ ಎಲ್ಲ ಧರ್ಮದ ಜನರು ಸಮಾನವಾಗಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ; ಇದೇ ಅಡ್ಯಾರ್‌ನ ನಿಜವಾದ ಸೌಹಾರ್ದ ಪರಂಪರೆ” ಎನ್ನುತ್ತಾರೆ.
ಎರಡು ದಿನಗಳ ಉರುಸ್‌ನಲ್ಲಿ ವಿಶೇಷ ಪ್ರಾರ್ಥನೆ, ಮಜ್ಲಿಸ್ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಯುತ್ತಿದೆ. ನಿರಂತರವಾಗಿ ಭಕ್ತರು ಬಂದು–ಹೋಗುತ್ತಿರುವುದರಿಂದ ದೋಣಿ ಸೇತುವೆ ಸದಾ ಚಲನೆಯಲ್ಲಿದೆ. ನದಿಯ ಮಧ್ಯೆ ನೆಲೆಸಿರುವ ನಡುಪಳ್ಳಿ ದರ್ಗಾ ಭಕ್ತಿ, ಶ್ರದ್ಧೆ ಮತ್ತು ಸಹಬಾಳ್ವೆಯ ಜೀವಂತ ಸಂಕೇತವಾಗಿ ಮುಂದುವರಿದಿದೆ. 52 ದೋಣಿಗಳ ಮೇಲೆ ನಿರ್ಮಿತವಾದ ಈ ತಾತ್ಕಾಲಿಕ ಸೇತುವೆ ಕೇವಲ ಮಾರ್ಗವಲ್ಲ, ಅದು ಶತಮಾನಗಳ ನಂಬಿಕೆಗೆ ಸೇತುವೆಯಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post