ಮಂಗಳೂರು, ಮೇ 3: ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಹೆಚ್ಚಾಗಿದ್ದು, ಗೃಹ ಸಚಿವ ಡಾ. ಜಿ ಪರಮೇಶ್ವರ್ ಶನಿವಾರ ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗೆ ಸೀಮಿತವಾಗಿ ಪ್ರತ್ಯೇಕವಾಗಿ ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಆರಂಭಿಸಲಾಗುವುದು ಎಂದರು.
ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ : ಕೋಮು ಗಲಭೆಗೆ ಕಾರಣವಾಗುವ ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ ಭರವಸೆ ನೀಡಿದರು. ಕೇರಳ ಮೂಲದ ಅಶ್ರಫ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ 21 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ. ಯಾವುದೇ ಸಮುದಾಯದವರು ಆಗಲೀ, ಕಾನೂನು ಉಲ್ಲಂಘನೆ ಮಾಡಲು ಬಿಡುವುದಿಲ್ಲ. ಇನ್ನು ಮುಂದೆ ಇಂತಹ ಘಟನೆಗಳು ಜಿಲ್ಲೆಯಲ್ಲಿ ನಡೆಯಬಾರದು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಬಿಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಯಾರು ಕಮ್ಯೂನಲ್ ಅಕ್ಟಿವಿಟಿ ಮಾಡ್ತಾರೆ, ಅವರಿಗೆ ಸಹಾಯ ಮಾಡ್ತಾರೆ ಎಂಬುದನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಎರಡು ಜಿಲ್ಲೆಯಲ್ಲಿ ಶಾಂತಿ ತರುವ ಉದ್ದೇಶದಿಂದ ಈ ಫೋರ್ಸ್ ಮಾಡುತ್ತೇವೆ. ಇದಕ್ಕಾಗಿ ನಕ್ಸಲ್ ವಿರೋಧಿ ಪಡೆಯಲ್ಲಿದ್ದ ನುರಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತೇವೆ. ಯಾರು ಪ್ರಚೋದನಕಾರಿ ಭಾಷಣ ಮಾಡ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಆ್ಯಂಟಿ ಕಮ್ಯೂನಲ್ ಪೋರ್ಸ್ ಕರಾವಳಿಯ ಎರಡು ಜಿಲ್ಲೆಗೆ ಮಾತ್ರ ಇರಲಿದೆ. ಪ್ರತೇಕವಾಗಿ ಅವರಿಗೆ ಅಧಿಕಾರ ನೀಡುತ್ತೇವೆ. ಅದರ ರೂಪುರೇಷೆಯನ್ನು ಶೀಘ್ರದಲ್ಲೇ ಮಾಡುತ್ತೇವೆ. ಈ ವಿಭಾಗದಲ್ಲಿ ಅಧಿಕಾರಿಗಳು ಬೇರೆ ಬೇರೆ ಕಡೆಯಿಂದ ಬರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪೊಲೀಸ್ ಅಧಿಕಾರಿಗಳು ಜೊತೆಗಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post