ಮಂಗಳೂರು, ಮೇ 3 : ರೌಡಿಶೀಟರ್ ಮತ್ತು ಹಿಂದು ಸಂಘಟನೆ ಕಾರ್ಯಕರ್ತನಾಗಿದ್ದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಎರಡು ವರ್ಷಗಳ ಹಿಂದೆ ಕೊಲೆಯಾದ ಫಾಜಿಲ್ ನ ಸಹೋದರ ಈ ಕೃತ್ಯಕ್ಕೆ ಹಣಕಾಸು ನೆರವು ನೀಡಿರುವುದನ್ನು ಪತ್ತೆ ಮಾಡಿದ್ದಾರೆ.
ಪೇಜಾವರ ಶಾಂತಿಗುಡ್ಡೆ ನಿವಾಸಿ, ಬಜಪೆ ಕಿನ್ನಿಪದವಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಡ್ರೈವರ್ ಅಬ್ದುಲ್ ಸಫ್ವಾನ್ (29), ಮೇಸ್ತಿ ಕೆಲಸ ಮಾಡಿಕೊಂಡಿದ್ದ ಶಾಂತಿಗುಡ್ಡೆ ನಿವಾಸಿ ನಿಯಾಜ್ (28), ಕೆಂಜಾರು ನಿವಾಸಿ ಮೊಹಮ್ಮದ್ ಮುಝಮಿಲ್ (32), ಕಳವಾರು ನಿವಾಸಿ ಕಲಂದರ್ ಶಾಫಿ (31), ಡ್ರೈವಿಂಗ್ ಕೆಲಸ ಮಾಡುತ್ತಿದ್ದ ಕಳಸ ನಿವಾಸಿ ರಂಜಿತ್ (19), ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಳಸದ ನಾಗರಾಜ್ (20), ಜೋಕಟ್ಟೆ ನಿವಾಸಿ ಮೊಹಮ್ಮದ್ ರಿಜ್ವಾನ್ (28) ಮತ್ತು ಅದಿಲ್ ಮೆಹರೂಫ್ ಬಂಧಿತರು.
ಆರೋಪಿಗಳ ಪೈಕಿ ಅಬ್ದುಲ್ ಸಫ್ವಾನ್ ಮೇಲೆ ಈ ಹಿಂದೆ ಸುಹಾಸ್ ಶೆಟ್ಟಿ ಮತ್ತು ಸಹಚರರು ಒಂದು ವರ್ಷದ ಹಿಂದೆ ಹಲ್ಲೆ ನಡೆಸಿದ್ದರು. ಇದಲ್ಲದೆ, ಸಫ್ವಾನ್ ನ್ನು ಕೊಲೆ ಮಾಡುವುದಾಗಿ ಸುಹಾಸ್ ಆನಂತರವೂ ಬೆದರಿಕೆ ಹಾಕಿದ್ದ. ಇದೇ ವಿಚಾರದಲ್ಲಿ ಸಫ್ವಾನ್ ಗೆ ಸುಹಾಸ್ ಮೇಲೆ ವೈಯಕ್ತಿಕ ದ್ವೇಷ ಇತ್ತು. ಇದೇ ವೇಳೆ, ಫಾಜಿಲ್ ಸೋದರ ಆದಿಲ್ ಮೆಹರೂಫ್ ತಾನು ಸುಹಾಸ್ ಶೆಟ್ಟಿ ಮುಗಿಸಲು ಹಣಕಾಸು ನೆರವು ನೀಡುವುದಾಗಿ ಸಹಕಾರ ನೀಡಿದ್ದ. ಪೊಲೀಸ್ ತನಿಖೆಯಲ್ಲಿ ಆದಿಲ್ ಆರೋಪಿಗಳಿಗೆ ಐದು ಲಕ್ಷ ನೀಡಿದ್ದಾನೆ ಎನ್ನುವುದು ಪತ್ತೆಯಾಗಿದೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್ಗೆ ಸುಹಾಸ್ ಶೆಟ್ಟಿ ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್ ತಮ್ಮ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು ಎಂದು ಹೇಳಿದ್ದಾರೆ. ಸುಹಾಸ್ ಕೊಲೆ ಮಾಡಲು ಸಫ್ವಾನ್ ತಂಡಕ್ಕೆ ಆದಿಲ್ 5 ಲಕ್ಷ ರೂ. ನೀಡಿದ್ದ. ಈ 5 ಲಕ್ಷ ರೂಪಾಯಿಗಾಗಿ ಆದಿಲ್ ಫಂಡಿಂಗ್ ಮಾಡಿದ್ದ. ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದರು. ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.
ಫಾಜಲ್ ಕೊಲೆಗೆ ಪ್ರತೀಕಾರ ಮತ್ತು ತನ್ನ ವೈಯಕ್ತಿಕ ದ್ವೇಷದಿಂದ ಅಬ್ದುಲ್ ಸಫ್ವಾನ್ ತನ್ನ ಸಂಗಡಿಗರ ಜೊತೆ ಸೇರಿ ಕೃತ್ಯ ಎಸಗಿದ್ದಾನೆ. ಇದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ನಾಗರಾಜ್ ಮತ್ತು ರಂಜಿತ್ ಸಹಕಾರ ನೀಡಿದ್ದಾರೆ. ಸದ್ಯಕ್ಕೆ ಕೃತ್ಯ ಎಸಗಿದ ಮತ್ತು ಸುಪಾರಿ ನೀಡಿದ ಒಟ್ಟು ಎಂಟು ಮಂದಿಯನ್ನು ಮಂಗಳೂರು ಸಿಸಿಬಿ ಎಸಿಪಿ ಮತ್ತು ಉತ್ತರ ವಿಭಾಗದ ಎಸಿಪಿ ನೇತೃತ್ವದ ಪೊಲೀಸರು ಬಂಧನ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಮತ್ತು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post