ಮಂಗಳೂರು: ಮಂಗಳೂರು ಪೊಲೀಸ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂರು ಬಾಹಿರ ಚಟುವಟಿಕೆಗಳಿಗೆ ಆಸ್ಪದ ಇಲ್ಲ ಮತ್ತು ಅದನ್ನು ಸಹಿಸಲ್ಲ ಎಂದು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಮತೀಯ ಗೂಂಡಾಗಿರಿ ಪ್ರಕರಣಗಳಲ್ಲಿ ನೇರ ಮತ್ತು ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನೂ ಪೊಲೀಸ್ ಇಲಾಖೆಯು ಗುರುತಿಸಿದೆ. ಈ ಎಲ್ಲಾ ಆರೋಪಿಗಳಿಂದ ಒಂದು ವರ್ಷದ ಮಟ್ಟಿಗೆ ಮುಚ್ಚಳಿಕೆ ಪಡೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಆರೋಪಿಗಳ ವಿರುದ್ಧ ಮನ್ನೆಚ್ಚರಿಕೆಯ ಕ್ರಮವಾಗಿ ಸಿಆರ್‌ಪಿಸಿ 107 ಮತ್ತು 110 ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಶಾಂತಿ ಉಲ್ಲಂಘಿಸಿದರೆ ದಂಡವನ್ನು ವಸೂಲಿ ಮಾಡಲಾಗುತ್ತದೆ. ಒಂದು ವರ್ಷದ ಅವಧಿಯ ಬಳಿಕವೂ ಕಾನೂನು ಉಲ್ಲಂಘಿಸಿದರೆ ಮುಚ್ಚಳಿಕೆಯ ಅವಧಿಯನ್ನು ವಿಸ್ತರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಜೂನ್ 1ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಬೀಚ್‌ನಲ್ಲಿ ವರದಿಯಾದ ಮತೀಯ ಗೂಂಡಾಗಿರಿಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಏಳು ಮಂದಿಯನ್ನು ಜೂನ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತ ಬಾಲಕನಿಗೆ ಸಂಬಂಧಿಸಿದಂತೆ ನ್ಯಾಯ ಮಂಡಳಿಗೆ ವರದಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ಮುಚ್ಚಳಿಕೆ ಷರತ್ತುಗಳನ್ನು ಉಲ್ಲಂಘಿಸಿದ ಒಂಬತ್ತು ಮಂದಿಯಿಂದ ನಗರ ಪೊಲೀಸರು 1.90 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಈ ವರ್ಷ 62 ರೌಡಿ ಶೀಟರ್‌ಗಳನ್ನು ಕಮಿಷನರೇಟ್ ವ್ಯಾಪ್ತಿಯಿಂದ ಹೊರ ಹಾಕಲಾಗಿದೆ. ನಗರದಲ್ಲಿ ವಿವಿಧ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ 1200 ಆರೋಪಿ ಗಳಿಂದ ಮುಚ್ಚಳಿಕೆ ಪಡೆದುಕೊಂಳ್ಳಲಾಗಿದೆ ಎಂದು ಕಮಿಷನರ್ ತಿಳಿಸಿದರು.
ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಂಶುಕುಮಾರ್ ಮಾತನಾಡಿ, ಸೋಮೇಶ್ವರ ಬೀಚ್‌ನಲ್ಲಿ ಮತೀಯ ಗೂಂಡಾಗಿರಿ ಘಟನೆ ವರದಿಯಾದ ಬಳಿಕ ಅಧಿಕ ಸಂಖ್ಯೆಯಲ್ಲಿ ಜನರು ಸೇರುವ ಬೀಚ್‌ಗಳು, ಮಾಲ್‌ಗಳ ಸಹಿತ ಪ್ರಮುಖ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲು ಕ್ರಮ ಜರಗಿಸಲಾಗಿದೆ. ಈ ಪ್ರದೇಶಗಳಲ್ಲಿ ಸಂಜೆ 5 ರಿಂದ ರಾತ್ರಿ 10 ರವರೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post