ಉಳ್ಳಾಲ: ಉಳ್ಳಾಲ ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಂಟು ಮನೆಗಳಿಗೆ ತೀವ್ರ ಹಾನಿಯಾಗಿದೆ. 58ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಂಬತ್ತು ಮನೆಗಳು ಜಲಾವೃತಗೊಂಡಿವೆ. ಗುಡ್ಡ ಕುಸಿತದಿಂದಲೂ ಕೆಲವೆಡೆ ಹಾನಿ ಉಂಟಾಗಿದೆ.
ಕೋಟೆಕಾರ್ ಪನೀರು ಬಳಿ ಅಬೂಸಾಲಿ ಮತ್ತು ಸೆಕಿನಾ ಅವರ ಮನೆ ಬದಿಯ ಮಣ್ಣು ಕುಸಿದು ಮನೆ ಆಪಾಯದಲ್ಲಿದೆ. ಹರೇಕಳ ಬೈತಾರ್ ಬಳಿ ನಾಜ್ಮ ಅವರ ಮನೆಗೆ ಮಳೆಯಿಂದ ಭಾಗಶಃ ಹಾನಿಗೊಳಗಾಗಿದೆ. ಬೋಳಿಯಾರುಗುತ್ತು ಬಳಿ ಹವ್ವಾ ಪೆಟ್ರೋಲ್ ಪಂಪ್ ಆವರಣ ಗೋಡೆ ಕುಸಿದು ಬಿದ್ದಿದೆ. ನರಿಂಗಾನ ಮೋರ್ಲ ಆರಿಫ್ ಅವರ ಮನೆಯ ತಡೆಗೋಡೆ ಕುಸಿದಿದೆ. ಮೀನಂಕೋಡಿ ಮುತಾಲಿಕ್ ಅವರ ಮನೆಯ ಹಿಂಬದಿಯಲ್ಲಿ ಗುಡ್ಡೆ ಕುಸಿತ ಉಂಟಾಗಿದೆ.

ಕುಕ್ಕಾಜೆ ಬೈಲು ಆಕಸಗಿಯಲ್ಲಿ ತೋಟಕ್ಕೆ ಮಣ್ಣು ತುಂಬಿದೆ. ಪಜೀರು ಅರ್ಕಾನದಲ್ಲಿ ರಸ್ತೆಗೆ ಗುಡ್ಡ ಕುಸಿತ ಉಂಟಾಗಿದ್ದರಿಂದ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಲಾಯಿತು. ಅಡ್ಕ ಬಳಿ ಮಣ್ಣಿನ ಸಂಪರ್ಕ ರಸ್ತೆಗೆ ಹಾನಿ, ಬದಲಿ ರಸ್ತೆಯನ್ನು ಮಾಡಲಾಗಿದೆ. ಕುರ್ನಾಡು ಪಡೀಲು ಮಿತ್ತ ಕೋಡಿಯಲ್ಲಿ ರಸ್ತೆಯಲ್ಲಿ ಮಣ್ಣು ಮತ್ತು ಕೆಸರು ತುಂಬಿ ಸಂಚಾರಕ್ಕೆ ತಡೆ ಉಂಟಾಗಿತ್ತು. ಹರೇಕಳ ಕಡೆಂಜ ಬಳಿ ಮೈಮುನ ಅವೆ ಮನೆಗೆ ಮರಬಿದ್ದು ಹಾನಿ, ಬೆಳ್ಮ ಬದ್ಯಾರ್‌ನಲ್ಲಿ ಅಬ್ದುಲ್ ರಹೆಮಾನ್ ಅವರ ಮನೆಗೆ ತಡೆಗೋಡೆ ಕುಸಿದು ಹಾನಿ ಉಂಟಾಗಿದೆ. ಅಂಬ್ಲಮೊಗರು ಅಂಗನವಾಡಿ ಬಳಿ ಗುಡ್ಡ ಕುಸಿತ, ಮದಕ ಬಳಿ ರಸ್ತೆಗೆ ಗುಡ್ಡ ಕುಸಿದುಬಿದ್ದಿದೆ. ಮಳೆ ಸಂತ್ರಸ್ತ ಪ್ರದೇಶಗಳಿಗೆ ಶಾಸಕ ಯು.ಟಿ.ಖಾದರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.
Discover more from Coastal Times Kannada
Subscribe to get the latest posts sent to your email.








Discussion about this post