ಮಂಗಳೂರು, ಆಗಸ್ಟ್ 3: ಸುರತ್ಕಲ್, ಕಾಟಿಪಳ್ಳ ಕೇಂದ್ರೀಕರಿಸಿ ಕಳೆದ ಆರು ವರ್ಷಗಳಲ್ಲಿ ಎಂಟಕ್ಕೂ ಹೆಚ್ಚು ಇಂಥ ನಕಲಿ ಸ್ಕೀಮ್ ಕಾರ್ಯಾಚರಣೆ ಮಾಡ್ತಿತ್ತು. ಮಂಗಳೂರು, ಉಳ್ಳಾಲದಲ್ಲಿ ಹತ್ತಕ್ಕೂ ಹೆಚ್ಚು ಲಕ್ಕಿ ಸ್ಕೀಮ್ ಇದೆ. ತಿಂಗಳಿಗೆ ಒಂದು ಸಾವಿರ ಕಟ್ಟಿದರೆ ಸಾಕು, ಪ್ರತಿ ತಿಂಗಳು ಕಾರು, ಫ್ಲಾಟ್ ಬಹುಮಾನ ಗೆಲ್ಲುವ ಆಮಿಷವೊಡ್ಡಿ ಜನರನ್ನು ಯಾಮಾರಿಸಿ ಹಣ ಕಿತ್ತುಕೊಂಡಿದ್ದಾರೆ. ಈ ರೀತಿ ಹಣ ಪೀಕಿಸಿಕೊಂಡ ಕಾಟಿಪಳ್ಳದ ನ್ಯೂ ಶೈನ್, ನ್ಯೂ ಇಂಡಿಯಾ, ಶೈನ್ ಮಾರ್ಟ್ ಎನ್ನುವ ಹೆಸರಲ್ಲಿ ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿದ್ದ ಖದೀಮರು ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ.
ನ್ಯೂ ಇಂಡಿಯಾ ಹೆಸರಲ್ಲಿ ಅಶ್ರಫ್ ಎನ್ನುವಾತ 18 ಸೀಸನ್ನಲ್ಲಿ ಅಂದಾಜು 30 ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿದ್ದು ಜನರನ್ನು ದೋಚಿ ಈಗ ನಾಪತ್ತೆಯಾಗಿದ್ದಾನೆ. ಒಂದು ಸೀಸನಲ್ಲಿ 12 ತಿಂಗಳು ಎಂದು ಹೇಳಿ ಸ್ಕೀಮ್ ಆರಂಭಿಸುತ್ತಿದ್ದ ಈ ಖದೀಮರು ಆನಂತರ 4-5 ತಿಂಗಳಲ್ಲಿ ಮತ್ತೊಂದು ಸೀಸನ್ ಮಾಡುತ್ತಿದ್ದರು. ಪ್ರತಿ ತಿಂಗಳು ಡ್ರಾದಲ್ಲಿ ಫ್ಲಾಟ್, ಥಾರ್ ಜೀಪು, ಐದು ಲಕ್ಷ ಮೌಲ್ಯದ ಚಿನ್ನದ ಸರ ಗೆಲ್ಲಬಹುದು ಎಂದು ಜನರನ್ನು ಆಕರ್ಷಿಸುತ್ತಿದ್ದರು. ಒಂದು ಸೀಸನಲ್ಲಿ 10ರಿಂದ 15 ಸಾವಿರದಷ್ಟು ಕಾರ್ಡ್ ಹಂಚಿಕೆ ಮಾಡಿದ್ದು ಒಂದೊಂದು ಸ್ಕೀಮ್ ಹೆಸರಲ್ಲಿ ಸಾವಿರಾರು ಜನರು ಹಣ ಕಟ್ಟಿ ಮೋಸ ಹೋಗಿದ್ದಾರೆ. ಈ ಸ್ಕೀಮ್ ಹೆಸರಲ್ಲಿ ವರ್ಷಕ್ಕೆ ಕೇವಲ 12 ಮಂದಿಗೆ ಮಾತ್ರ ಬಹುಮಾನ ನೀಡುವ ಭರವಸೆ ಇರುತ್ತದೆ. ಡ್ರಾವನ್ನು ನೇರ ಲೈವ್ ಮಾಡುತ್ತೇವೆಂದು ತೋರಿಸ್ತಿದ್ದರೂ ಈ ದುಬಾರಿ ಬಹುಮಾನ ಪಡೆದವರಿಲ್ಲ. ಕೆಲವರಿಗೆ ಸಿಕ್ಕಿದೆ ಎನ್ನುವ ವದಂತಿ ಸೃಷ್ಟಿಸಿ, ಕೆಲವರಿಗೆ ಮನೆ ಕಟ್ಟಿಸಿಕೊಡುತ್ತಿದ್ದೇವೆಂದು ಹೇಳಿ, ಇನ್ನು ಕೆಲವರಿಗೆ ಸ್ಕೂಟರ್, ಕಡಿಮೆ ಮೊತ್ತದ ಕಾರು ತೆಗೆಸಿಕೊಟ್ಟು ಯಾಮಾರಿಸುತ್ತಿದ್ದರು. ಇದೇ ನೆಪದಲ್ಲಿ ಬಹುಮಾನ ಗೆಲ್ಲದೆ ಉಳಿದುಬಿಟ್ಟವರನ್ನು ಮತ್ತಷ್ಟು ಹಣ ಹಾಕಿದರೆ ದೊಡ್ಡ ಗಿಫ್ಟ್ ಗೆಲ್ಲಬಹುದೆಂದು ಮತ್ತೊಂದು ಸೀಸನ್ನಿಗೆ ಸೇರಿಸುತ್ತಿದ್ದರು. ಇದೇ ಪ್ರಕಾರದಲ್ಲಿ ಒಂದೊಂದು ಸೀಸಲ್ಲಿ ಕಡಿಮೆ ಎಂದರೂ ಹತ್ತು ಸಾವಿರಕ್ಕು ಹೆಚ್ಚು ಜನರು ಸೇರ್ಪಡೆ ಆಗುತ್ತಿದ್ದರು.
ಬಹುಮಾನ ಗೆಲ್ಲದವರಿಗೆ ಆ ಮೌಲ್ಯದ ಚಿನ್ನ, ಫರ್ನಿಚರ್, ಇಲೆಕ್ಟ್ರಾನಿಕ್ ಉಪಕರಣ ಇತ್ಯಾದಿ ಯಾವುದೇ ವಸ್ತುಗಳನ್ನು ಪಡೆಯಬಹುದು ಅಥವಾ ಹಣವನ್ನೂ ಬಡ್ಡಿ ಸಹಿತ ಪಡೆಯುವ ಅವಕಾಶ ಇದೆ ಎಂದು ಹೇಳುತ್ತಿದ್ದರು. ಆದರೆ ಹಣ, ವಸ್ತುಗಳನ್ನು ಕೊಡುವ ಬದಲು ಗ್ರಾಹಕರನ್ನು ಮುಂದಿನ ಸೀಸನ್ನಿಗೆ ಹಾಕುತ್ತೇವೆಂದು ಹೇಳಿ ಮತ್ತಷ್ಟು ಹಣ ಕಟ್ಟುವಂತೆ ಮಾಡುತ್ತಿದ್ದರು. ನ್ಯೂ ಇಂಡಿಯಾ ಸ್ಕೀಮ್ ಮಾಲೀಕ ಅಶ್ರಫ್ ಎನ್ನುವಾತ ಎರಡು ತಿಂಗಳ ಹಿಂದೆಯೇ ತನ್ನ ಕಚೇರಿಗೆ ಶಟರ್ ಹಾಕಿದ್ದು ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ‘ದಯವಿಟ್ಟು ಗ್ರಾಹಕರು ಗಾಬರಿಗೊಳ್ಳಬೇಡಿ, ಎಲ್ಲರಿಗೂ ನಿಮ್ಮ ಹಣ ಕೊಡುತ್ತೇನೆ’ ಎಂದು ವಿಡಿಯೋ ಮಾಡಿ ವಾಟ್ಸಪ್ ಹಾಕಿದ್ದಾನೆ. ಈ ರೀತಿ ಎರಡು ತಿಂಗಳಲ್ಲಿ ಗಡುವನ್ನು ಮುಂದಕ್ಕೆ ಹಾಕುತ್ತಾ ನಾಲ್ಕು ಬಾರಿ ವಿಡಿಯೋ ಮಾಡಿದ್ದಾನೆ. ಆದರೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಗ್ರಾಹಕರು ತಮ್ಮ ಲಕ್ಷಾಂತರ ರೂ. ಹಣ ಯಾರಲ್ಲಿ ಕೇಳೋದು ಅಂತ ಭಯಕ್ಕೆ ಒಳಗಾಗಿದ್ದಾರೆ. ಇದೇ ವೇಳೆ, ಈ ಸ್ಕೀಮ್ ಪರವಾಗಿ ಗ್ರಾಹಕರನ್ನು ಮಾಡಿಕೊಟ್ಟಿದ್ದ ಏಜಂಟರನ್ನು ಗ್ರಾಹಕರು ಪ್ರಶ್ನೆ ಮಾಡುತ್ತಿದ್ದಾರೆ. ಏಜಂಟರಿಗೂ ಸ್ಕೀಮಿಗೆ ಹೆಚ್ಚು ಜನರನ್ನು ಸೇರಿಸಿದರೆ ಗಿಫ್ಟ್ ನೀಡುವ ಆಮಿಷ ತೋರಿಸಿ ಹೆಚ್ಚೆಚ್ಚು ಜನರನ್ನು ಸ್ಕೀಮ್ ಸೇರಿಸಿಕೊಂಡಿದ್ದರು. ನಾಲ್ಕೈದು ಕಾರ್ಡ್ ಪಡೆದು ಪ್ರತಿ ತಿಂಗಳು ಹಣ ಕಟ್ಟುತ್ತ ಮೋಸ ಹೋದವರು ಈಗ ತಲೆಗೆ ಕೈಹೊತ್ತು ಕುಳಿತಿದ್ದಾರೆ.
ನ್ಯೂ ಶೈನ್ ಹೆಸರಲ್ಲಿ ಕಾಟಿಪಳ್ಳದ ಖುರೇಷಿ ಎನ್ನುವಾತ ಸ್ಕೀಮ್ ಮಾಡಿದ್ದು 12ಕ್ಕೂ ಹೆಚ್ಚು ಸೀಸನ್ ಮಾಡಿದ್ದಾನೆ. ಕಾಟಿಪಳ್ಳದಲ್ಲಿ ಶೈನ್ ಮಾರ್ಟ್ ಎಂಬ ಹೆಸರಲ್ಲಿ ದೊಡ್ಡ ಶಾಪನ್ನೂ ಆರಂಭಿಸಿದ್ದ ಈ ಖುರೇಷಿ, ಅಲ್ಲಿಯೇ ನ್ಯೂ ಶೈನ್ ಹೆಸರಲ್ಲಿ ಗ್ರಾಹಕರ ದುಡ್ಡು ಬಳಸಿ ಸ್ವಂತ ಕಟ್ಟಡ (ಕಾಂಪ್ಲೆಕ್ಸ್) ಖರೀದಿಸಿದ್ದಾನೆ. ಅದರ ಮೇಲಿನ ಮಹಡಿಯಲ್ಲಿ ಶೈನ್ ಸ್ಕೀಮಿನ ಕಚೇರಿಯನ್ನು ಮಾಡಿಕೊಂಡಿದ್ದ. ಈಗ ತನ್ನ ಕಚೇರಿ ಕ್ಲೋಸ್ ಮಾಡಿ ನಾಪತ್ತೆಯಾಗಿದ್ದಾನೆ. ಇತ್ತೀಚೆಗೆ ಸಿಟ್ಟಿಗೆದ್ದ ಗ್ರಾಹಕರು ಶೈನ್ ಹೆಸರಲ್ಲಿದ್ದ ಇಲೆಕ್ಟ್ರಾನಿಕ್ ಶಾಪ್ ಗೆ ನುಗ್ಗಿ ಅಲ್ಲಿದ್ದ ಎಲ್ಲ ವಸ್ತುಗಳನ್ನೂ ಕಿತ್ತುಕೊಂಡು ಹೋಗಿದ್ದಾರೆ.
ಈ ಖುರೇಷಿ ಎನ್ನುವಾತ ಹಿಂದೆ ಹನಿಟ್ರ್ಯಾಪ್ ಜಾಲದಲ್ಲಿ ತೊಡಗಿಸಿ ವಿಡಿಯೋ ಮುಂದಿಟ್ಟು ಹಣ ಕೀಳುತ್ತಿದ್ದ. ಚಿಕ್ಕಮಗಳೂರಿನ ಹನಿಟ್ರ್ಯಾಪ್ ಪ್ರಕರಣದ ಬಳಿಕ ಈತನನ್ನು ಎಸ್ಡಿಪಿಐ, ಪಿಎಫ್ಐನಿಂದ ಸ್ವಲ್ಪ ದೂರ ಇರಿಸಲಾಗಿತ್ತು. ಇದೇ ಖುರೇಷಿ ಬಿಎಂಆರ್, ವಿಶನ್ ಇಂಡಿಯಾ ರೀತಿಯಲ್ಲೆ ತನ್ನದೇ ಸ್ಕೀಮ್ ಆರಂಭಿಸಿ ಕೋಟ್ಯಂತರ ರೂಪಾಯಿ ಕಮಾಯಿ ಮಾಡಿದ್ದಾನೆ. ಅಂದಾಜು ಇಂತಹ ಸ್ಕೀಮಲ್ಲಿ ಒಬ್ಬೊಬ್ಬರು ಕಡಿಮೆ ಅಂದ್ರೂ 25 ಕೋಟಿ ಸಂಗ್ರಹ ಮಾಡಿದ್ದು ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯಕ್ಕೆ ಕಾಟಿಪಳ್ಳದಲ್ಲಿ ಎರಡು ಸ್ಕೀಮ್ ಪೂರ್ತಿ ಬಂದ್ ಆಗಿದ್ದು 25 ಸಾವಿರಕ್ಕೂ ಹೆಚ್ಚು ಜನರಿಗೆ ದೋಖಾ ಆಗಿದೆ.
ವಿಶೇಷ ಅಂದ್ರೆ, ಇಂಥ ಸ್ಕೀಮ್ ಗಳಲ್ಲಿ ಹೆಚ್ಚಾಗಿ ಹಣ ಕಳಕೊಂಡವರು ಸುಳ್ಯ, ಪುತ್ತೂರು, ಬೆಳ್ತಂಗಡಿ, ಮೂಡುಬಿದ್ರೆ ಕಡೆಯವರಂತೆ. ಹಳ್ಳಿ ಕಡೆಯ ಜನರನ್ನು ಏಜಂಟರು ಯಾಮಾರಿಸಿ ಈ ಸ್ಕೀಮಿಗೆ ಹೆಚ್ಚೆಚ್ಚು ಸೇರಿಸಿದ್ದಾರೆ. ಕಾಟಿಪಳ್ಳ, ಸುರತ್ಕಲ್ ನಲ್ಲಿ ಕಚೇರಿ ಇದ್ದರೂ ದೂರದ ಮಂದಿಯೇ ಹೆಚ್ಚು ಇವರ ಕರಾಮತ್ತಿಗೆ ಬಲಿಯಾಗಿದ್ದಾರೆ. ಪೊಲೀಸ್ ಕೇಸು ಕೊಟ್ಟರೆ ಹಾಕಿದ ಹಣವೂ ಸಿಗಲ್ಲ ಎನ್ನುವ ಭಯದಲ್ಲಿ ದೂರು ಕೊಡಲು ಮುಂದೆ ಬರುತ್ತಿಲ್ಲ ಎನ್ನುತ್ತಾರೆ, ಸುರತ್ಕಲ್ ಪೊಲೀಸರು.
Discover more from Coastal Times Kannada
Subscribe to get the latest posts sent to your email.
Discussion about this post