ಮಂಜೇಶ್ವರ: ಕುಂಜತ್ತೂರು ತೂಮಿನಾಡು ಹಿಲ್ ಟಾಪ್ ನಲ್ಲಿ ಅಪ್ಪನಿಂದ ಮಗಳು ಕೊಲೆಯಾದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಹುಡುಗಿಯ ತಾಯಿಯ ಅಕ್ಕನ ಪತಿ ಶೇಕುಂಞಿ (63) ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮನೆಯಲ್ಲಿ ಆಸ್ತಿ ಸಂಬಂಧಿಸಿ ಸೋಮವಾರ ಸಂಜೆ ಮಾತುಕತೆ ಸಂದರ್ಭ ಆರೋಪಿ ಉಮ್ಮರ್ ದ್ವೇಷದಿಂದ ಶೇಕುಂಞಿ ಅವರಿಗೆ ಚೂರಿ ಹಾಕಲು ಪ್ರಯತ್ನಿಸಿದ್ದ.
ಈ ಸಂದರ್ಭದಲ್ಲಿ ದೊಡ್ಡಪ್ಪನ ರಕ್ಷಣೆಗೆ ನಡುವೆ ಬಂದ ಮರಿಯಮತ್ ಜುಮೈಲಾ (18) ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದರು. ಪ್ರಕರಣದ ಆರೋಪಿ ಉಮ್ಮರ್ ಕೆ.ಎಂ (50) ನನ್ನು ಮಂಜೇಶ್ವರ ಪೊಲೀಸರು ಸೋಮವಾರ ಘಟನೆ ನಡೆದ ಕೂಡಲೇ ವಶಕ್ಕೆ ಪಡೆದಿದ್ದು, ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸೋಮವಾರ ಸಂಜೆ 5 ಗಂಟೆ ವೇಳೆಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ತುಮ್ಮಿನಾಡಿನಲ್ಲಿ ಘಟನೆ ನಡೆದಿತ್ತು. ಆರೋಪಿ ಉಮ್ಮರ್ ಫಾರೂಕ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಉಮ್ಮರ್ ಫಾರೂಕ್ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದು, ಪತ್ನಿಯ ಜೊತೆಗಿನ ವಿರಸದಿಂದ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದ. ಆನಂತರ, ಪತ್ನಿ ತಾಹಿರಾ (41) ಮಾತಿಗೆ ಮಾತು ಬೆಳೆದು ನಿನ್ನ ಸಂಬಂಧವೇ ಬೇಡ, ವಿಚ್ಛೇದನ ಕೊಟ್ಟುಬಿಡು ಎಂದು ಹೇಳಿದ್ದಳು. ಅದರಂತೆ, ತನ್ನ ತಂಗಿಯ ಮನೆಯಲ್ಲಿ ಮಾತುಕತೆಗೆಂದು ಗಂಡ ಉಮ್ಮರ್ ನನ್ನು ಕರೆದಿದ್ದಳು.
ಉಮರ್ ಫಾರೂಕ್ ಕತ್ತಿ ಹಿಡಿದು ಬಂದಿದ್ದರೆ, ತಾಹಿರಾ ತನ್ನ ಮಗಳು ಮರಿಯಮ್ಮ ಜುಮೈಲಾ ಜೊತೆಗೆ ತಂಗಿ ಮನೆಗೆ ಬಂದಿದ್ದಳು. ಈ ವೇಳೆ ಮಾತುಕತೆ ನಡೆದು ತನ್ನಲ್ಲಿದ್ದ ಚಿನ್ನಾಭರಣ ಮತ್ತು ಮನೆಯ ಆಸ್ತಿಪತ್ರಗಳನ್ನು ಉಮರ್ ಫಾರೂಕ್ ಕೈಗೆ ನೀಡಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಾಗಲೇ ಪತ್ನಿ ಜೊತೆಗೆ ನಿಂತಿದ್ದ ಮಗಳು ಜುಮೈಲಾ ಮೇಲೆ ತನ್ನ ಕೈಯಲ್ಲಿದ್ದ ಕತ್ತಿಯಿಂದ ಏಕಾಏಕಿ ಕಡಿದಿದ್ದಾನೆ. ಈ ವೇಳೆ ತಡೆಯಲು ಬಂದ ಪತ್ನಿಯ ತಂಗಿಯ ಗಂಡ ಸೇಕುಂಞ್ಞ ಮೇಲೂ ಕತ್ತಿಯಿಂದ ದಾಳಿ ನಡೆಸಿದ್ದಾನೆ. ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ಒಯ್ದಿದ್ದು, ದಾರಿ ಮಧ್ಯದಲ್ಲೇ ಮಗಳು ಜುಮೈಲಾ ಸಾವನ್ನಪ್ಪಿದ್ದಳು.
ಉಮ್ಮರ್ ಫಾರೂಕ್ ಹಲ್ಲೆ ಮಾಡುವ ಉದ್ದೇಶದಿಂದಲೇ ತನ್ನ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದಿದ್ದ ಎಂದು ಮಂಜೇಶ್ವರ ಪಂಚಾಯತ್ ಸದಸ್ಯ ಇಲ್ಯಾಸ್ ತುಮ್ಮಿನಾಡು ‘ಮನೋರಮಾ’ಕ್ಕೆ ತಿಳಿಸಿದ್ದಾರೆ. ಜುಮೈಲಾ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದರಿಂದ ನೆಲಕ್ಕೆ ಕುಸಿದು ಬಿದ್ದಿದ್ದು, ನೆಲದಲ್ಲಿ ರಕ್ತ ಕೋಡಿಯಂತೆ ಹರಿದಿತ್ತು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾಳೆ. ಜುಮೈಲಾ(18) ಎಸ್ಸೆಸ್ಸೆಲ್ಸಿ ಮುಗಿಸಿ ಉಪ್ಪಳದ ಶಾಲೆಯಲ್ಲಿ ಪ್ಲಸ್ ವನ್ ಓದುತ್ತಿದ್ದಳು.
ಉಮ್ಮರ್ ಫಾರೂಕ್ ಗಾಂಜಾ, ಮತ್ತು ಮಾರಿಜುವಾನಾ ಡ್ರಗ್ಸ್ ಸೇವನೆಯ ಚಟಕ್ಕೆ ಹೊಂದಿದ್ದು, ಹಲವಾರು ಕೇಸುಗಳನ್ನು ಹೊಂದಿದ್ದಾನೆ. ಇದೇ ಕಾರಣಕ್ಕೆ ಗಂಡ – ಹೆಂಡತಿ ಮಧ್ಯೆ ಜಗಳವಾಗಿತ್ತು. ಜಗಳ ವಿರಸಕ್ಕೆ ಕಾರಣವಾಗಿ ವಿಚ್ಛೇದನ ವರೆಗೆ ಹೋಗಿತ್ತು. ಪತ್ನಿ ತಾಹಿರಾ ತನ್ನ ಮಗಳ ಜೊತೆಗೆ ಪ್ರತ್ಯೇಕ ಇರುತ್ತೇನೆ, ನೀನು ನನ್ನ ಬದುಕಿನಿಂದಲೇ ದೂರವಾಗು ಎಂದು ಹೇಳಿದ್ದಳು. ಆದರೆ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಪತ್ನಿಯ ಮೇಲೆ ಕತ್ತಿಯಿಂದ ಕಡಿಯಲು ಮುಂದಾಗಿದ್ದ. ಪತ್ನಿಯ ಮೇಲೆ ಹಲ್ಲೆ ನಡೆಸುತ್ತಾನೆಂದು ಮಗಳೇ ಮುಂದೆ ನಿಂತು ಮಾತುಕತೆ ಮಾಡಿದ್ದಳು. ಆದರೆ ಡ್ರಗ್ಸ್ ಅಮಲಿನಲ್ಲಿ ಅಲ್ಲಿಂದ ಹಿಂತಿರುಗುತ್ತಿದ್ದಾಗ ಮಗಳನ್ನೇ ಕುತ್ತಿಗೆ ಕಡಿದು ಹತ್ಯೆ ಮಾಡಿದ್ದಾನೆ. ತಡೆಯಲು ಬಂದ ಪತ್ನಿಯ ಸೋದರಿ ಗಂಡನೂ ಚೂರಿ ಇರಿತಕ್ಕೊಳಗಾಗಿ ದುರಂತ ಸಾವನ್ನಪ್ಪಿದ್ದಾರೆ. ಉಮ್ಮರ್ ಫಾರೂಕ್ ಡ್ರಗ್ಸ್ ಅಮಲಿನಿಂದಲೇ ಇಂಥ ಕೃತ್ಯ ಎಸಗಿದ್ದಾನೆಂದು ಸ್ಥಳೀಯರು ಹೇಳುತ್ತಿದ್ದಾರೆ. ಮಂಜೇಶ್ವರ, ಕಾಸರಗೋಡು ಭಾಗದಲ್ಲಿ ಗಾಂಜಾ, ಡ್ರಗ್ಸ್ ವಹಿವಾಟು ಜೋರಾಗಿದ್ದು ಪೊಲೀಸರಿಗೆ ಗೊತ್ತಿದ್ದೇ ದಂಧೆ ನಡೆಯುತ್ತಿದೆ. ಹೆಚ್ಚಾಗಿ ಮುಸ್ಲಿಂ ಯುವಕರೇ ಈ ಕೃತ್ಯದಲ್ಲಿ ತೊಡಗಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post