ಬೆಳ್ತಂಗಡಿ: ಬೆಳಾಲು ಗ್ರಾಮದ ಕೂಡೋಳುಕೆರೆ-ಮುಂಡ್ರೊಟ್ಟು ರಸ್ತೆಯಲ್ಲಿ ಮಾ.22ರಂದು ಬೆಳಿಗ್ಗೆ ಮೂರು ತಿಂಗಳ ಹೆಣ್ಣು ಮಗುವನ್ನು ಕಾಡಿನ ರಸ್ತೆ ಬದಿ ಬಿಟ್ಟು ತಲೆಮರೆಸಿಕೊಂಡಿದ್ದ ಪ್ರಕರಣದ ಮಗುವಿನ ಹೆತ್ತವರು ಪತ್ತೆಯಾಗಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಪೊಲೀಸರು ಕಾಡಿನಲ್ಲಿ ಪತ್ತೆಯಾದ ಮಗುವಿನ ತಂದೆ-ತಾಯಿಯ ಗುರುತು ಪತ್ತೆ ಮಾಡಿದ್ದಾರೆ. ಇಬ್ಬರೂ ಮಗುವಿನ ಹೆತ್ತವರು ತಾವೇ ಎಂದು ಖಚಿತಪಡಿಸಿಕೊಂಡಿದ್ದು, ಮದುವೆಯಾಗುವುದಾಗಿ ಒಪ್ಪಿರುವುದಾಗಿ ತಿಳಿದು ಬಂದಿದೆ.
ಬೆಳಾಲು ಕಾಡಿನಲ್ಲಿ ಪತ್ತೆಯಾದ ಮಗುವನ್ನು ರಕ್ಷಿಸಿ ಉಪಚರಿಸಿದ ಬಳಿಕ, ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಮಂಗಳೂರಿನ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ ಮಾಡಲಾಯಿತು. ಇದೀಗ ಅಲ್ಲಿನ ಪ್ರಕ್ರಿಯೆಯ ನಂತರ ಪುತ್ತೂರು ರಾಮಕೃಷ್ಣ ಸೇವಾಶ್ರಮಕ್ಕೆ ಕಳುಹಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖಾ ಮೇಲ್ವಿಚಾರಕಿ ಅನ್ನಪೂರ್ಣ ಮಾ.22ರಂದು ನೀಡಿದ ದೂರಿನಂತೆ BNS93 (ಅಪರಿಚಿತ ಹೆಣ್ಣು ಮಗುವನ್ನು ಯಾರೋ ಬಿಟ್ಟು ಹೋದ)ಬಗ್ಗೆ ಪ್ರಕರಣ ದಾಖಲಾಗಿತ್ತು. ನಿಖರ ಮಾಹಿತಿಯ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್.ಗಾಣಿಗೇರಾ ಮತ್ತು ತಂಡ ಮಗುವಿನ ತಂದೆ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಬುಧವಾರ ರಾತ್ರಿ ಮಗುವಿನ ತಂದೆ ರಂಜಿತ್ ಗೌಡ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮದುವೆಯಾಗುವುದಾಗಿ ಒಪ್ಪಿದ ದಂಪತಿ: ಪೋಷಕರನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರಂಜಿತ್ ಗೌಡ (27) ಮತ್ತು ಧರ್ಮಸ್ಥಳ ಗ್ರಾಮದ ನಿವಾಸಿ ಸುಶ್ಮಿತಾ ಗೌಡ (22) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸರು ಇದೀಗ ಮಗುವಿನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಎದುರು ಇಬ್ಬರೂ ಸ್ವಇಚ್ಛೆಯಿಂದ ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.
ಕಾನೂನು ಪ್ರಕ್ರಿಯೆ (DNA) ಮುಗಿದ ಬಳಿಕ ಪುತ್ತೂರು ಆಶ್ರಮದಲ್ಲಿರುವ ಮಗುವನ್ನು ತಂದೆ-ತಾಯಿಗೆ ಹಸ್ತಾಂತರಿಸಲಿದ್ದಾರೆ. ರಂಜಿತ್ ಮತ್ತು ಸುಶ್ಮಿತಾ ಪರಸ್ಪರ ಪ್ರೀತಿಸುತ್ತಿದ್ದ ವಿಚಾರ ಎರಡು ಮನೆಯವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿತ್ತು. ಪ್ರೀತಿಸಿದಾತ ಮದುವೆಯಾಗುತ್ತಾನೆಂದು ನಂಬಿದ ಯುವತಿ ದೈಹಿಕ ಸಂಬಂಧಕ್ಕೆ ಒಪ್ಪಿಕೊಂಡ ಪರಿಣಾಮ ಗರ್ಭಿಣಿಯಾಗಿದ್ದಳು.
ಈ ವಿಚಾರವನ್ನು ಮನೆಯವರಿಗೆ ತಿಳಿಸಿರಲಿಲ್ಲ. ಹೀಗಾಗಿ, ದಂಪತಿಗಳಂತೆ ಉಜಿರೆಯ ಕ್ಲಿನಿಕ್ಗಳಿಗೆ ಪ್ರತಿ ತಿಂಗಳು ಹೋಗುತ್ತಿದ್ದರು. ವೈದ್ಯರು ತಾಯಿ ಕಾರ್ಡ್ ಕೇಳಿದಾಗ ‘ಕಳೆದು ಹೋಗಿದೆ’ ಎಂದು ಹೇಳಿದ್ದರು. ಉಜಿರೆಯಲ್ಲಿ ಬಾಡಿಗೆ ಮನೆ ಮಾಡಿ ಆಕೆಯನ್ನು ಬಿಟ್ಟಿದ್ದ ರಂಜಿತ್ ವಾರಕ್ಕೊಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದನು. ನಿಯಮಬಾಹಿರವಾಗಿ ನಾರ್ಮಲ್ ಡೆಲಿವರಿ ಆಗಿದ್ದರಿಂದ ಆಸ್ಪತ್ರೆಗೆ ಹೋಗದೆ ಬಾಡಿಗೆ ರೂಂನಲ್ಲಿ ವಾಸವಾಗಿದ್ದರು.
ಮದುವೆಯಾಗದೆ ಗರ್ಭಿಣಿಯಾಗಿ ಮಗು ಹುಟ್ಟಿದ ಕಾರಣ ಕುಟುಂಬದವರ ಭಯದಿಂದ ಮರ್ಯಾದೆಗಂಜಿದ್ದರು. ಪೊಲೀಸರು ಹೋಗುವವರೆಗೂ ಈ ಜೋಡಿಯ ಅನಧಿಕೃತ ದಾಂಪತ್ಯ ಸಂಸಾರದ ವಿಚಾರ ಎರಡೂ ಮನೆಯ ಪೋಷಕರಿಗೆ ಗೊತ್ತಾಗಿರಲಿಲ್ಲ. ಇದೀಗ ಪ್ರಕರಣ ಸುಖಾಂತ್ಯ ಕಾಣುವ ಹಂತದಲ್ಲಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಮಗುವಿನ ಹೆತ್ತವರ ವಿಚಾರಣೆ ಬಳಿಕ ಬೆಳಕಿಗೆ ಬರಬೇಕಿದೆ.
ಮಕ್ಕಳ ಕಲ್ಯಾಣ ಸಮಿತಿಯಲ್ಲಿ ನೋಂದಣಿಗೊಂಡು 60 ದಿನಗಳೊಳಗಾಗಿ ಹೆತ್ತವರು ತಮ್ಮ ಸೂಕ್ತ ಗುರುತು, ದಾಖಲೆಗಳನ್ನು ತೋರಿಸಿ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಮಗುವನ್ನು ಮರಳಿ ಪಡೆಯುವ ಅವಕಾಶವಿರುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post