ಪುತ್ತೂರು, ಜುಲೈ 3 : ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರನಿಂದ ಗರ್ಭಿಣಿಯಾಗಿ ಮಗುವಿಗೆ ಜನ್ಮವಿತ್ತ ಸಂತ್ರಸ್ತ ಯುವತಿಯ ಜೊತೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಫೋನಲ್ಲಿ ಮಾತನಾಡಿದ್ದು ನ್ಯಾಯ ದೊರಕಿಸಲು ಧ್ವನಿ ಎತ್ತುವುದಾಗಿ ಹೇಳಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಸಂತ್ರಸ್ತ ಯುವತಿಯ ಮನೆಗೆ ಭೇಟಿ ನೀಡಿದ್ದು ಇದೇ ವೇಳೆ ಮಹಿಳಾ ಆಯೋಗದ ಅಧ್ಯಕ್ಷರಿಗೆ ಫೋನಾಯಿಸಿ ದೂರು ಹೇಳಿದ್ದಾರೆ.
ಬಳಿಕ ಮಾಧ್ಯಮದ ಜತೆಗೆ ಮಾತನಾಡಿ, ಅನ್ಯಾಯವಾದ ಯುವತಿಯ ಅಮ್ಮನಾಗಿ ನಾನು ಅವಳನ್ನು ಮನೆಗೆ ಸೇರಿಸುವ ಜವಾಬ್ದಾರಿ ನನ್ನದು. ಬಡವರಾಗಿದ್ದು, ತಾಯಿ ಮಗುವಿನ ಸಂಪೂರ್ಣ ಖರ್ಚು ವೆಚ್ಚ ವನ್ನು ನಾನೇ ಭರಿಸುತ್ತೇನೆ. ಕಾರಣಗಳನ್ನು ನೀಡಿ ಯುವಕ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದೆಲ್ಲದಕ್ಕೂ ವಿವಾಹವೊಂದೇ ಪರಿಹಾರವಾಗಿದೆ ಎಂದರು.
ತಪ್ಪು ಮಾಡದ ಮಗುವಿಗೆ ಅಪ್ಪನ ಅಗತ್ಯವಿದೆ. ದುಡ್ಡಿ ಇದ್ದರೂ, ಕಾನೂನಿಗಿಂತ ಯಾರೂ ಮೇಲೆಯಲ್ಲ. ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿಯವರಲ್ಲಿ ಈ ಬಗ್ಗೆ ಮಾತುಕತೆಯನ್ನು ನಡೆಸಿದ್ದೇನೆ. ಆಯೋಗದ ಅಧಿಕಾರಿಗಳಿಂದ ಅಗತ್ಯ ನೆರವು ಲಭಿಸಲಿದೆ. ಹಿಂದುಳಿದ ವರ್ಗದ ಇಲಾಖೆಯಿಂದಲೂ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಯುವಕನ ಪತ್ತೆ ವಿಚಾರದಲ್ಲಿ ತಾಯಿ ಕರೆದುಕೊಂಡು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಮಾತುಕತೆ ನಡೆಸುತ್ತೇನೆ. ಸಂಧಾನಕ್ಕೆ ಒಪ್ಪದಿದ್ದರೆ, ಕೊನೆಯಲ್ಲಿ ಹೆಣ್ಣುಮಕ್ಕಳಿಗೂ ಬೇಕಾದಷ್ಟು ಕಾನೂನಿನ ಅವಕಾಶಗಳಿದೆ ಎಂದರು.
ಸಂತ್ರಸ್ತೆ ತಾಯಿ ಜೊತೆ ಮಾತನಾಡುವ ವೇಳೆ ನಿಮ್ಮ ಜೊತೆ ನಾನಿದ್ದೇನೆ, ಧೈರ್ಯ ಕಳೆದುಕೊಳ್ಳಬೇಡಿ, ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸಿಕೊಂಡು ಜೀವನ ಮಾಡಬೇಡಿ, ‘ಅಂತಹ ದೊಡ್ಡ ತಪ್ಪು ನೀವೇನೂ ಮಾಡಿಲ್ಲ, ಇವತ್ತಿಂದ ಮಾಸ್ಕ್ ತೆಗೆದು ಧೈರ್ಯದಿಂದ ಇರಬೇಕು ಎಂದು ಹೇಳಿ ಸಂತ್ರಸ್ತೆ ತಾಯಿ ಮುಖಕ್ಕೆ ಹಾಕಿದ್ದ ಮಾಸ್ಕ್ ಅನ್ನು ಪ್ರತಿಭಾ ಕುಳಾಯಿ ತೆಗೆಸಿದರು. ಇಂತಹ ಘಟನೆಗಳು ನಡೆದಾಗ ಯಾವುದೇ ಕಾರಣಕ್ಕೂ ಮಹಿಳೆಯಾದವಳು ಧೈರ್ಯ ಕಳೆದುಕೊಳ್ಳಬಾರದು, ಬದಲಾಗಿ ಇಂತಹವರ ವಿರುದ್ಧ ಹೋರಾಟ ಮಾಡಬೇಕು ಎಂದರು.
ಇದೇ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಜೊತೆ ಸಂತ್ರಸ್ತೆಯ ತಾಯಿ ನಮಿತಾ ಫೋನಲ್ಲಿ ಮಾತನಾಡಿದರು. ಈ ವೇಳೆ ನ್ಯಾಯ ದೊರಕಿಸಿ ಕೊಡುವಂತೆ ಸಂತ್ರಸ್ತೆಯ ತಾಯಿ ನಮಿತಾ ಕೇಳಿಕೊಂಡರು. ಫೋನ್ ಸಂಭಾಷಣೆಯಲ್ಲಿ ಧೈರ್ಯ ಹೇಳಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post