ಸುಬ್ರಹ್ಮಣ್ಯ: ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಮತ್ತು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಹಾನಿ ಸಂಭವಿಸಿದೆ. ಹರಿಹರ ಪಲ್ಲತ್ತಡ್ಕ ಪೇಟೆಯಲ್ಲಿ ಭೂಕುಸಿತದಿಂದ ಚಿತ್ರಣವೇ ಬದಲಾಗಿದೆ. ಈ ಗ್ರಾಮಗಳ ಕೆಲವು ಪ್ರದೇಶಗಳು ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿದ್ದು, ಅಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ. ಸೇತುವೆ ಕೊಚ್ಚಿಹೋಗಿದ್ದರಿಂದ ಗುಳಿಕಾನ ಭಾಗದ ಜನ ದಿಗ್ಬಂಧನಕ್ಕೆ ಸಿಲುಕಿದರು. ಹೊಳೆಯಲ್ಲಿ ನೀರಿನೊಂದಿಗೆ ತೇಲಿ ಬಂದ ಭಾರಿ ಮರಗಳ ಹೊಡೆತಕ್ಕೆ ಹರಿಹರ ಪಲ್ಲತ್ತಡ್ಕದ ಬಾಳುಗೋಡು ಸಂಪರ್ಕದ ಸೇತುವೆಯ ಪಾರ್ಶ್ವ ಭಾಗಶಃ ಕುಸಿದಿದೆ. ಇಲ್ಲಿನ ಕಾಂಕ್ರೀಟ್ ರಸ್ತೆಯ 100 ಮೀ ಉದ್ದಕ್ಕೆ ಭಾಗಶಃ ಕುಸಿದಿದ್ದು, ಇದರಲ್ಲಿ ದ್ವಿಚಕ್ರ ವಾಹನ ಹೊರತಾಗಿ ಇತರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಬಾಳುಗೋಡು, ಕೊತ್ನಡ್ಕ ಸಂಪರ್ಕ ಕಡಿತವಾಗಿದೆ.
ಹರಿಹರ ಪಲ್ಲತ್ತಡ್ಕ ಪೇಟೆಯಲ್ಲಿ ದಿನಸಿ ಮಳಿಗೆ, ಔಷಧಾಲಯ, ಹೋಟೆಲ್, ಅಡಿಕೆ ಅಂಗಡಿ, ಕೋಳಿ ಅಂಗಡಿ ಸಹಿತ 15ಕ್ಕೂ ಅಧಿಕ ಅಂಗಡಿಗಳಿಗೆ ನೀರು ನುಗ್ಗಿದೆ. ಫ್ಯಾನ್ಸಿ ಹಾಗೂ ಸೆಲೂನ್ ಪೂರ್ತಿ ನೀರು ಪಾಲಾಗಿದೆ. ಮನೆಗಳಿಗೂ ಹಾನಿಯಾಗಿದೆ. ಬಾಳುಗೋಡು ಗ್ರಾಮದ ಸಿದ್ದನಗುಡ್ಡ ಜರಿದು ಉಪ್ಪುಕಳ ಭಾಗಕ್ಕೆ ಸಂಪರ್ಕ ಕಡಿತವಾಗಿದೆ. ಬಾಳುಗೋಡು ಪದಕ ಸೇತುವೆ ನೀರು ಪಾಲಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಕೊಲ್ಲಮೊಗ್ರು ಚಾಳೆಪ್ಪಾಡಿ ಹೇಮಂತ್ ಅವರ ಮನೆ ಕುಸಿದಿದ್ದು, ಒಂದು ದನ, ಮೂರು ನಾಯಿಗಳು ಸತ್ತಿವೆ. ಕರಂಗಲ್ಲು ದೊಡ್ಡಕಜೆ ಪರಿಸರದ ಗಿರಿಧರ, ವಾಸುದೇವ, ಲೋಕಯ್ಯ, ಮೋಹನದಾಸ್ ಮನೆಗಳು ದ್ವೀಪವಾಗಿವೆ. ಬೆಂಡೋಡಿಯ ಸಂಪರ್ಕ ಸೇತುವೆಗೆ ಹಾನಿಯಾಗಿದೆ. ತೋಟಗಳು ಜಲಾವೃತಗೊಂಡಿದೆ. ಕಲ್ಮಕಾರು ಗ್ರಾಮದ ಗಡಿಕಲ್ಲು ದಬ್ಬಡ್ಕ ಸುರೇಶ್ ಅವರ ಮನೆಗೆ ಗುಡ್ಡೆ ಕುಸಿದು ಹಾನಿಯುಂಟಾಗಿದೆ. ಕಲ್ಮಕಾರು ಪೇಟೆ–ಬೈಲು ಸಂಪರ್ಕ ಸೇತುವೆ ಕೊಚ್ಚಿಹೋಗಿ 150ಕ್ಕೂ ಅಧಿಕ ಮನೆಗಳಿಗೆ ಸಂಪರ್ಕವೇ ಇಲ್ಲದಂತಾಗಿದೆ.
ಶಾಲಾ– ಕಾಲೇಜುಗಳಿಗೆ ರಜೆ: ಭಾರಿ ಮಳೆಯಾದ ಕಾರಣ ಸುಳ್ಯ ಹಾಗೂ ಕಡಬ ತಾಲ್ಲೂಕುಗಳ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post