ಮಂಗಳೂರು : ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಹಕಾರಿ ರಂಗ ಬೆಳೆಯಲು ಮೊಳಹಳ್ಳಿ ಶಿವರಾವ್ ಅವರು ಹಾಕಿ ಕೊಟ್ಟ ಭದ್ರ ತಳಪಾಯ ಕಾರಣ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಸೋಮವಾರ ಸಹಕಾರಿ ಪಿತಾಮಹ ದಿ। ಮೊಳಹಳ್ಳಿ ಶಿವರಾವ್ ಅವರ 145 ಜನ್ಮ ದಿನಾಚರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರ ಎಲ್ಲರನ್ನು ಬೆಳೆಸುತ್ತದೆ. ಮೊಳಹಳ್ಳಿ ಶಿವರಾಯರು ಸಮಾಜಕ್ಕೆ ದೊಡ್ಡ ಕೊಡುಗೆ ಸಹಕಾರಿ ಕ್ಷೇತ್ರ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಲ ಪಡೆದ ರೈತರು ಶೇ.100 ಮರುಪಾವತಿ ಮಾಡಿರುವುದು ದೇಶದಲ್ಲೆ ಅಪರೂಪದ ಸಾಧನೆ. ಜಿಲ್ಲೆಯಲ್ಲಿ ರೈತರಿಗೆ ಸಾಲ ಸೌಲಭ್ಯ ದೊರೆತಿಲ್ಲ ಎನ್ನುವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಈ ಸಾಧನೆಗೆ ಜಿಲ್ಲೆಯಾದ್ಯಂತ ವಿಸ್ತರಿಸಿರುವ ಸಹಕಾರಿ ಸಂಸ್ಥೆ, ಅಲ್ಲಿನ ಸಿಬ್ಬಂದಿಗಳು ಆಡಳಿತ ಮಂಡಳಿ ಹಾಗೂ ಸದಸ್ಯರ ಪ್ರಮುಖ ಪಾತ್ರ ಇದೆ. ಕೃಷಿ ಸಾಲಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದೇವೆ. ಕೃಷಿ ಸಾಲದ ಸಂದರ್ಭದಲ್ಲಿ ಲಾಭದ ಉದ್ದೇಶ ಮುಖ್ಯ. ಸಹಕಾರಿ ಸಂಘಗಳು ವಾಣಿಜ್ಯ ಬ್ಯಾಂಕ್ ಗಳನ್ನು ಮೀರಿಸುವ ರೀತಿಯಲ್ಲಿ ಬೆಳೆಯಬೇಕಾಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಸಹಕಾರಿ ರಂಗದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಬಗ್ಗೆ ಉಪನ್ಯಾಸ ನೀಡುತ್ತಾ, 145ನೇ ಜನ್ಮದಿನಾಚರಣೆ ಈ ಸಮಾರಂಭದಲ್ಲಿ ನಾವೆಲ್ಲ ಸೇರಿದ್ದೇವೆ. ಈ ಜಿಲ್ಲೆ ಇಂದು ಪ್ರಗತಿಪಥದಲ್ಲಿ ಮುಂದುವರಿಯುತ್ತಿದ್ದರೆ, 20ನೇ ಶತಮಾನದಲ್ಲಿ ಅದಕ್ಕೆ ಅಡಿಪಾಯ ಹಾಕಿದ ಅನೇಕ ಮಹನೀಯರ ರಕ್ತ ಬೆವರು ಅದರ ಹಿಂದೆ ಇದೆ ಎನ್ನುವುದನ್ನು ನಾವು ಸದಾ ನೆನಪು ಮಾಡಿಕೊಳ್ಳಬೇಕಾಗಿದೆ. ಅಂತಹ ಒಂದು ಮಹನೀಯರ ಸಾಲಲ್ಲಿ ಮೊಳಹಳ್ಳಿ ಶಿವರಾಯರೂ ಒಬ್ಬರು. ಜಿಲ್ಲೆಯಲ್ಲಿ 1909 ರಲ್ಲಿ ಸಹಕಾರಿ ಸಂಸ್ಥೆ ಅರಂಭವಾಗಿತ್ತು. ಮಹಾತ್ಮಾ ಗಾಂಧಿ ಅವರು ಜಿಲ್ಲೆಗೆ ಮೂರು ಬಾರಿ ಎಂದರೆ 1920, 1927 ಮತ್ತು 1954 ರಲ್ಲಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಸಹಕಾರ, ಸ್ವದೇಶಿ ಮತ್ತು ಸಾಮಾಜಿಕ ಪರಿವರ್ತನೆ ಕುರಿತಂತೆ ಸಂದೇಶ ನೀಡಿದ್ದರು. ಆದರೆ ಮೊಳಹಳ್ಳಿ ಶಿವರಾಯರು ಈ ಮೂರೂ ವಿಷಯಗಳಲ್ಲಿ ಇದಕ್ಕಿಂತ ಮೊದಲೇ ಕಾರ್ಯ ಪ್ರವೃತ್ತರಾಗಿದ್ದರು ಎಂದು ಹೇಳಿದರು. ಸಹಕಾರಿ ರಂಗದಲ್ಲಿ ಭವಿಷ್ಯ ನಿರ್ಮಾಣ ಮಾಡಲು ಸಹಕಾರಿ ಚಳವಳಿಯ ಇತಿಹಾಸದ ದಾಖಲೀಕರಣ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ‘ಕರಾವಳಿ ಸಹಕಾರಿ’ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಮುಖ್ಯ ಕಾರ್ಯ. ನಿರ್ವಹ ಣಾಧಿಕಾರಿ, ಗೋಪಾಲಕೃಷ್ಣ ಭಟ್, ನಬಾರ್ಡ್ ಡಿ.ಜಿ.ಎಂ.ಸಂಗೀತ ಕರ್ತ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ನಿರ್ದೇಶಕರು, ಮಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಲಿ. ನಿರ್ದೇಶಕರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post