ಬೆಳ್ತಂಗಡಿ: ‘ಆರ್ಥಿಕ ವ್ಯವಹಾರದ ಶಿಸ್ತು ಇದ್ದರೆ ಸಂಸ್ಥೆ ಬೆಳೆಯುತ್ತದೆ ಎಂಬುದಕ್ಕೆ ಶ್ರೀಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಬೆಳವಣಿಗೆಯೇ ಸಾಕ್ಷಿ. ಸಹಕಾರಿ ಸಂಘಗಳು ಅರ್ಥಿಕ ವ್ಯವಹಾರ ಜೊತೆ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಸಹಕಾರಿ ಸಂಘಗಳು ಸಾಲ ನೀಡುವ ಜೊತೆ ಗ್ರಾಹಕರಿಗೆ ಮರುಪಾವತಿ ತಂತ್ರಗಾರಿಕೆಯನ್ನು ಕಲಿಸಬೇಕು’ ಎಂದು ಸೋಲೂರು ಮಠದ ಪೀಠಾಧೀಶ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಬೆಳ್ತಂಗಡಿ ಭಾರತ್ ಪೆಟ್ರೋಲ್ ಬಂಕ್ ಬಳಿ ಸುಮಾರು ರೂ. 4 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಶ್ರೀಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ‘ಸಂಸ್ಥೆ ಬೆಳೆದಂತೆ ನೂರಾರು ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ನೂರಾರು ಕುಟುಂಬಗಳು ಬೆಳಗಲು ಸಾಧ್ಯ. ಮುಂದಿನ ದಿನಗಳಲ್ಲಿ ನೂರು ಶಾಖೆಗಳು ತೆರೆದು ಪ್ರಗತಿಯ ಉತ್ತುಂಗಕ್ಕೆ ಏರಲಿ’ ಎಂದರು.
ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ, ಬ್ಯಾಂಕಿನ ನಿರ್ದೇಶಕ ಕೆ. ವಸಂತ ಬಂಗೇರ ಮಾತನಾಡಿ, ‘ನಾಲ್ಕು ವರ್ಷದ ಹಿಂದೆ ಕಟ್ಟಡ ನಿರ್ಮಿಸುವ ಉದ್ದೇಶ ಇತ್ತು. ಅದರೆ, ತಾಂತ್ರಿಕ ಕಾರಣದಿಂದ ವಿಳಂಬವಾಯಿತು. ಇದೀಗ ಸ್ವಂತ ನಿಧಿಯಿಂದಲೇ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಇದೊಂದು ದಾಖಲೆಯಾಗಿದೆ’ ಎಂದರು.
ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬ್ಯಾಂಕ್ ಆರ್ಥಿಕ ವ್ಯವಹಾರದ ಜೊತೆ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಗ್ರಾಹಕರು, ಸಿಬ್ಬಂದಿ, ಆಡಳಿತ ಮಂಡಳಿಯ ಸಹಕಾರದಿಂದ ಬ್ಯಾಂಕ್ ಪ್ರಗತಿ ಸಾಧಿಸಿದೆ’ ಎಂದರು.
ಸಂಘದ ಉಪಾಧ್ಯಕ್ಷ ಭಗೀರಥ ಜಿ, ನಿರ್ದೇಶಕರಾದ ಸುಜಿತಾ ವಿ. ಬಂಗೇರ, ತನುಜಾ ಶೇಖರ್, ಶೇಖರ ಬಂಗೇರ, ಸಂಜೀವ ಪೂಜಾರಿ, ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ., ಗಂಗಾಧರ ಮಿತ್ತಮಾರ್, ಚಂದ್ರಶೇಖರ್, ಆನಂದ ಪೂಜಾರಿ, ಡಾ.ರಾಜಾರಾಮ್ ಕೆ.ಬಿ., ಜಯವಿಕ್ರಮ್, ವಿಶೇಷ ಅಧಿಕಾರಿ ಎಂ.ಮೋನಪ್ಪ ಪೂಜಾರಿ ಇದ್ದರು. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಸ್ವಾಗತಿಸಿದರು. ನಿರ್ದೇಶಕ ಧರಣೇಂದ್ರ ಕುಮಾರ್ ವಂದಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post