ಸುರತ್ಕಲ್, ಸೆ.4: ಇಲ್ಲಿನ ಕಳವಾರು ಬಳಿ ರವಿವಾರ ಸಂಜೆ ಯುವಕನೋರ್ವನ ಮೇಲೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಳವಾರು ಬೆಂಕಿನಾಥೇಶ್ವರ ದೇವಸ್ಥಾನ ಬಳಿಯ ನಿವಾಸಿ ಪ್ರಶಾಂತ್ ಯಾನೆ ಪಚ್ಚು(28), ಕಳವಾರು ಆಶ್ರಯಕಾಲನಿ ನಿವಾಸಿ ಧನರಾಜ್(23) ಮತ್ತು ಕಳವಾರು ಚರ್ಚ್ ಗುಡ್ಡೆ ಸೈಟ್ ನಿವಾಸಿ ಯಜ್ಞೇಶ್(22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು, ಉಳಿದವರಿಗಾಗಿ ಸುರತ್ಕಲ್ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಗಸ್ಟ್ 31ರಂದು ಕಳವಾರಿನಲ್ಲಿ ಗಲಾಟೆಯಲ್ಲಿ ಗಂಟೆ ರಿಯಾಝ್ ಎಂಬಾತನ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸರು ಕಳವಾರಿನಲ್ಲಿ ಸೆ.3ರಂದು ಶಾಂತಿ ಸಭೆಯನ್ನು ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಮಾತನಾಡಲಿದೆ ಎಂದು ಅಬ್ದುಲ್ ಸಫ್ಘಾನ್ ಎಂಬಾತನನ್ನು ಆರೋಪಿಗಳು ಕರೆದಿದ್ದರು. ಹೀಗಾಗಿ ಅಬ್ದುಲ್ ಸಫ್ವಾನ್ ತನ್ನ ಸ್ನೇಹಿತ ಮುಹಮ್ಮದ್ ಸಫ್ವಾನ್ ಎಂಬಾತನೊಂದಿಗೆ ಸಂಜೆ 7:30ರ ಸುಮಾರಿಗೆ ಕಳವಾರು ಗೆಳೆಯರ ಬಳಗ ಬಸ್ಸು ನಿಲ್ದಾಣದ ಬಳಿ ಬೈಕಿನಲ್ಲಿ ತೆರಳುತ್ತಿದ್ದಾಗ ಎದರುಗಡೆಯಿಂದ ಆರೋಪಿಗಳಾದ ಪ್ರಶಾಂತ್ ಮತ್ತು ಧನರಾಜ್ ಎಂಬವರು ತಮ್ಮ ಬೈಕ್ ನಿಂದ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಆರೋಪಿ ಧನರಾಜ್ ಮಾರಕಾಸ್ತ್ರದಿಂದ ಅಬ್ದುಲ್ ಸಫ್ವಾನ್ ನ ಕಣ್ಣಿಗೆ ಬಲವಾಗಿ ಗುದ್ದಿದ್ದಾನೆ. ಆರೋಪಿ ಪ್ರಶಾಂತ ಡ್ರಾಗರ್ ಚೂರಿಯಿಂದ ಸಂತ್ರಸ್ತನ ಬಲ ಕಂಕುಳಕ್ಕೆ ತಿವಿದಿದ್ದಾನೆ.
ತಕ್ಷಣ ಸ್ಥಳಕ್ಕೆ ಬಂದ ಇತರ ಆರೋಪಿಗಳ ಪೈಕಿ ಕಳವಾರು ಗಣೇಶ ಎಂಬಾತ ಸಫ್ವಾನ್ ನ ಬಲಕೈ ತೋಳಿಗೆ ಚೂರಿಯಿಂದ ಇರಿದಿದ್ದು, ಯಜ್ಞೇಶ ಎಂಬಾತ ಬೆನ್ನಿಗೆ ಚೂರಿಯಿಂದ ಚುಚ್ಚಿದ್ದಾನೆ. ರಕ್ಷಣೆಗೆ ಬಂದ ಸ್ನೇಹಿತ ಮುಹಮ್ಮದ್ ಸಫ್ವಾನ್ ನನ್ನು ಆರೋಪಿಗಳಾದ ಪುನೀತ್, ಬಬ್ಬು ಗಣೇಶ್, ಪ್ರದೀಪ್ ಮತ್ತು ಇತರರು ರಕ್ಷಣೆಗೆ ಬಾರದಂತೆ ಕೈಯಿಂದ ಹೊಡೆದು ಬಿಗಿಯಾಗಿ ಹಿಡಿದುಕೊಂಡಿದ್ದರು. ಆಗ ಸಾರ್ವಜನಿಕರು ಸೇರಲು ಆರಂಭಿಸಿದಾಗ ಆರೋಪಿಗಳು ಮುಂದಕ್ಕೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಸಂತ್ರಸ್ತ ಅಬ್ದುಲ್ ಸಫ್ವಾನ್ ದೂರಿನಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post