ಮಂಗಳೂರು ಅ 04 : ಹಿಂದು ಸಮಾಜವನ್ನು ಕೆಣಕುವ, ತುಳಿಯುವ ಪ್ರಯತ್ನಕ್ಕೆ ಉತ್ತರ ನೀಡುವ ಶಕ್ತಿ ` ಭಾರತಕ್ಕಿದೆ. ಹಿಂದುಗಳನ್ನು ತುಳಿದು ಮೇಲಕ್ಕೆ ಬರುವುದು ಯಾರಿಗೂ ಸಾಧ್ಯವಿಲ್ಲ. ಹಿಂದುತ್ವದ ಜಾಗೃತಿಗಾಗಿ ವಿಶ್ವಹಿಂದು ಪರಿಷತ್, ಬಜರಂಗದಳ ರಥಯಾತ್ರೆ ಹಮ್ಮಿಕೊಂಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ ಹೇಳಿದರು.
ವಿಶ್ವಹಿಂದು ಪರಿಷತ್‍ಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬಜರಂಗದಳದ ನೇತೃತ್ವದಲ್ಲಿ ಸೆ. 25ರಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಶೌರ್ಯ ಜಾಗರಣ ರಥಯಾತ್ರೆ ಅಂಗವಾಗಿ ಅ. 9ಕ್ಕೆ ಮಂಗಳೂರಿನಲ್ಲಿ ನಡೆಯಲಿರುವ ಬೃಹತ್ ಶೋಭಾಯಾತ್ರೆ ಮತ್ತು ಸಾರ್ವಜನಿಕ ಸಭೆ ಹಿನ್ನೆಲೆಯಲ್ಲಿ ಪ್ರಚಾರ ರಥಕ್ಕೆ ನಗರದ ಬಂಟ್ಸ್ ಹಾಸ್ಟೆಲ್‍ನ ಕಾರ್ಯಾಲಯ ಬಳಿ ಚಾಲನೆ ನೀಡಿ ಬುಧವಾರ ಅವರು ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ಸಂಕ್ರಾಂತಿ ವೇಳೆ ಉದ್ಘಾಟನೆಗೊಳ್ಳಲಿದೆ. ಹಿಂದು ಸಮಾಜವನ್ನು ಜಾಗೃತಿಗೊಳಿಸುವ ಕೆಲಸವೂ ಆಗುತ್ತಿದೆ ಎಂದರು.
ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಹಿಂದುಗಳದ್ದು ಸೋಲಿನ ಇತಿಹಾಸ ಅಲ್ಲ, ಶೌರ್ಯದ ಇತಿಹಾಸ ಎಂಬುದನ್ನು ಜನತೆಗೆ ಮನವರಿಕೆ ಮಾಡಲು ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ವಿಹಿಂಪ ಜಿಲ್ಲಾ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ ಮಾತನಾಡಿ, ಅ.9ರಂದು ಮಧ್ಯಾಹ್ನ 2.30ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದವರೆಗೆ ಬೃಹತ್ ಶೋಭಾಯಾತ್ರೆ ಏರ್ಪಡಿಸಲಾಗಿದ್ದು, ಡಾ.ಪ್ರಭಾಕರ ಭಟ್ ಕಲ್ಕಡ್ಕ ಉದ್ಘಾಟಿಸುವರು. ಬಳಿಕ ಕದ್ರಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು, ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸುವರು. ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡುವರು. ಸಾವಿರಾರು ಮಂದಿ ಕಾರ್ಯಕರ್ತರು, ಮಾತೆಯರು ಭಾಗವಹಿಸಲಿದ್ದಾರೆ ಎಂದರು.
ವಿಹಿಂಪ ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ, ಕಾರ್ಯದರ್ಶಿ `ಭುಜಂಗ ಕುಲಾಲ್ ಉಪಸ್ಥಿತರಿದ್ದರು. ರವಿ ಅಸೈಗೋಳಿ ಕಾರ್ಯಕ್ರಮ ನಿರೂಪಿಸಿದರು. ರಥಯಾತ್ರೆ ಮಂಗಳೂರು ನಗರ, ಉಳ್ಳಾಲ, ಮುಲ್ಕಿ, ಮೂಡುಬಿದಿರೆ, ಸುರತ್ಕಲ್, ಗುರುಪುರ ಭಾಗಗಳಲ್ಲಿ ಸಂಚರಿಸಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post