ನವದೆಹಲಿ, ಅ 3: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಿಡ್ನಿ ಸಂಬಂಧಿತ ತೊಂದರೆಗಳಿಂದಾಗಿ 11 ಮಕ್ಕಳು ಸಾವನ್ನಪ್ಪಿದ್ದರು. ಕೆಮ್ಮಿನ ಸಿರಪ್ ಸೇವಿಸಿದ್ದರಿಂದಲೇ ಅವರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬಾರದು ಎಂದು ಶಿಫಾರಸು ಮಾಡಿದೆ.
ಕೇಂದ್ರ ಸರ್ಕಾರವು ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಕ್ಕಳಿಗೆ ತೀರಾ ಅಗತ್ಯವಿದ್ದರೆ ಮಾತ್ರ ಕೆಮ್ಮಿನ ಸಿರಪ್ ನೀಡಲು ಸೂಚಿಸಿದೆ. ಕೆಮ್ಮಿನ ಸಿರಪ್ ಮಾದರಿಗಳ ಪರೀಕ್ಷೆಗಳು “ಡೈಥಿಲೀನ್ ಗ್ಲೈಕಾಲ್ (Diethylene Glycol-DEG) ಎಂಬ ವಿಷಕಾರಿ ರಾಸಾಯನಿಕ ಅಂಶ ಪತ್ತೆಯಾದ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಸರ್ಕಾರವು ಸಹ ಈ ಸಿರಪ್‌ನ ಮಾರಾಟವನ್ನು ನಿಷೇಧಿಸಿದೆ.
ಮಧ್ಯಪ್ರದೇಶದ ಛಿಂದ್‌ವಾರಾ ಜಿಲ್ಲೆಯಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದ ಭರತ್ ಹಾಗೂ ಸಿಕರ್ ಜಿಲ್ಲೆಯಲ್ಲಿ 2 ಮಕ್ಕಳು ಸೇರಿ ಒಟ್ಟು 11 ಕಂದಮ್ಮಗಳು ಸಾವನ್ನಪ್ಪಿದ್ದಾರೆ. ಈ ಘಟನೆಗಳ ಬೆನ್ನಲ್ಲೇ ರಾಜಸ್ಥಾನ ಸರ್ಕಾರವು ಕೇಸನ್ಸ್ ಫಾರ್ಮಾ ಕಂಪನಿಯ 19 ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ, ರಾಜಸ್ಥಾನದ ಔಷಧ ನಿಯಂತ್ರಕರಾದ ರಾಜಾರಾಮ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ.
ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಎಂಬ ಎರಡು ಕೆಮ್ಮಿನ ಸಿರಪ್‌ಗಳು ಮಕ್ಕಳ ಸಾವಿಗೆ ಕಾರಣವಾಗಿವೆ ಎಂದು ಆರೋಪಿಸಲಾಗಿದೆ. ಈ ಸಿರಪ್‌ಗಳನ್ನು ಸೇವಿಸಿದ ಮಕ್ಕಳಿಗೆ ಮೂತ್ರ ವಿಸರ್ಜನೆ ನಿಂತು, ದೇಹದಲ್ಲಿ ಊತ ಕಾಣಿಸಿಕೊಂಡು, ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಸಿರಪ್ ನೀಡದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಾಮಾನ್ಯವಾಗಿ ಸಿರಪ್‌ಗಳ ಅಗತ್ಯ ಇರುವುದಿಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆಯಂತೆ ಸೂಕ್ತ ಪ್ರಮಾಣದಲ್ಲಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post