ಮಂಗಳೂರು, ನ.4: ಕದ್ದ ಮಾಲನ್ನು ವಾಪಸ್ ಕೊಡುವ ಹೊಸ ಪರಿಪಾಠ ಕಾಂಗ್ರೆಸ್ ಸರಕಾರದಲ್ಲಿ ಬೆಳೆದು ಬಂದಿದೆ. ವಾಲ್ಮೀಕಿ ಹಗರಣದಲ್ಲಿ ಭ್ರಷ್ಟಾಚಾರ ಒಪ್ಪಿಕೊಂಡ ಬಳಿಕ ಮುಡಾ ಪ್ರಕರಣದಲ್ಲಿಯೂ ಪತ್ನಿ ಪಡೆದ 14 ಸೈಟ್ ಗಳನ್ನು ಸಿದ್ದರಾಮಯ್ಯ ವಾಪಸ್ ಮಾಡಿದ್ದಾರೆ. ಇದೀಗ ವಕ್ಫ್ ಕಾಯ್ದೆಯಡಿ 50 ವರ್ಷಗಳ ಹಿಂದಿನ ನೋಟಿಫಿಕೇಶನ್ ಆಧರಿಸಿ 1200 ಎಕ್ರೆ ಭೂಮಿಗೆ ನೋಟೀಸ್ ಕೊಟ್ಟು ವಾಪಸ್ ಮಾಡಿಸಿದ್ದಾರೆ. ಕದಿಯೋದು, ಸಿಕ್ಕಿಬಿದ್ದಾಗ ವಾಪಸ್ ಮಾಡೋದು ಖಯಾಲಿಯಾಗಿದೆ. ಕೇಂದ್ರ ಸರಕಾರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತೆ ಎಂದು ತಿಳಿದು ರಾಹುಲ್ ಗಾಂಧಿ ಅಣತಿಯಂತೆ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ಮಾಡುತ್ತಿದ್ದಾರೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳೂರು ನಗರದ ಹಂಪನಕಟ್ಟೆಯ ಮಿನಿ ವಿಧಾನಸೌಧ ಮುಂಭಾಗದಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ಮತ್ತು ಸಿದ್ದರಾಮಯ್ಯ ಸರ್ಕಾರದ ನಡೆ ವಿರೋಧಿಸಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ವಕ್ಫ್ ಕಾಯ್ದೆ ಬ್ರಿಟಿಷರು ಹಿಂದು – ಮುಸ್ಲಿಂ ಒಡೆದಾಳುವುದಕ್ಕಾಗಿ ಮಾಡಿದ್ದ ಕಾಯ್ದೆ. ಅದನ್ನು ಯಥಾವತ್ ಸ್ವಾತಂತ್ರ್ಯ ಭಾರತದಲ್ಲಿ ಜಾರಿಗೆ ತಂದಿದ್ದು ಕಾಂಗ್ರೆಸ್. ಆದರೆ, ಬಡ ಮುಸ್ಲಿಮರ ಉದ್ಧಾರ ಮಾಡುವ ಬದಲು ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಲ್ಯಾಂಡ್ ಜಿಹಾದ್ ಮಾಡಿದ್ದಾರೆ. ದೇಶಾದ್ಯಂತ ವಕ್ಫ್ ಆಸ್ತಿಯನ್ನು ಲೂಟಿ ಮಾಡಿದ್ದಾರೆ.
ವಕ್ಫ್ ಕಾನೂನು ಮೂಲಕ ಕಬಳಿಕೆ ಮಾಡಿದ ರೈತರ ಹಾಗೂ ಇತರರ ಜಮೀನನ್ನು ಟ್ರಿಬ್ಯುನಲ್‌ನಲ್ಲಿ ಮಾತ್ರ ಪ್ರಶ್ನೆ ಮಾಡಬಹುದು. ಟ್ರಿಬ್ಯುನಲ್‌ನಲ್ಲಿ ವಕ್ಫ್ ಭೂಮಿ ಎಂದು ಅಂತಿಮಗೊಂಡರೆ ಮುಂದಕ್ಕೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ವಕ್ಫ್ ಕಾನೂನು ತಿದ್ದುಪಡಿಗೆ ಕೇಂದ್ರ ಸರಕಾರ ಮುಂದಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೂಚನೆಯಂತೆ ವಕ್ಫ್ ಕಾನೂನು ತಿದ್ದುಪಡಿ ಕುರಿತ ಜಂಟಿ ಸಂಸದೀಯ ಸಮಿತಿಯಲ್ಲಿ ಕಾಂಗ್ರೆಸ್ ಸದಸ್ಯರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದೇ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಗೂ ಸಚಿವ ಝಮೀರ್ ಅಹ್ಮದ್ ಅವರು ರೈತರ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತನೆ ಮಾಡುತ್ತಿದ್ದಾರೆ ಎಂದರು.
ಬಡ ಮುಸ್ಲಿಮರ ಶಿಕ್ಷಣ ಸೇರಿದಂತ ಇತರ ಉದ್ದೇಶಕ್ಕೆ ಮೀಸಲಿಟ್ಟ 59 ಸಾವಿರ ಎಕರೆ ಭೂಮಿಯಲ್ಲಿ 27 ಸಾವಿರ ಎಕರೆ ಭೂಮಿಯನ್ನು ಮುಸ್ಲಿಂ ಮುಖಂಡರೇ ಶಾಮೀಲಾಗಿ ಅವರ ಸಮುದಾಯಕ್ಕೆ, ಅಲ್ಲಾಹುವಿಗೆ ದ್ರೋಹವೆಸಗಿದ್ದಾರೆ. ವಕ್ಫ್ ಆಸ್ತಿ ರಕ್ಷಿಸಲು ಅನ್ವರ್ ಮಾಣಿಪ್ಪಾಡಿ ವರದಿ ಜಾರಿಗೊಳಿಸಬೇಕು. ವಕ್ಫ್ ಕಾನೂನಿಗೆ ಕೇಂದ್ರ ಸರಕಾರ ತಿದ್ದುಪಡಿ ತರ ಲಿದ್ದು, ರೈತರ, ಹಿಂದುಗಳ ಜಾಗ ಉಳಿಸಲು ಬದ್ಧವಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಪ್ರತಿಯೊಂದು ಹಗರಣದಲ್ಲೂ ಆರೋಪ ಸಾಬೀತಾಗಿದ್ದು, ಭೂಮಿ, ನೋಟಿಸು ವಾಪಸ್ ಮಾಡಿದ ಕೂಡಲೇ ಹಗರಣ ಮುಕ್ತವಾಗುವುದಿಲ್ಲ ಎಂದರು.
ಶಾಸಕ ಭರತ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಎಲ್ಲ ಹಿಂದುಗಳು ತಮ್ಮ ಜಮೀನಿನ ಆರ್‌ಟಿಸಿ ಪರಿಶೀಲನೆ ಮಾಡಬೇಕಾದ ಭಯದ ವಾತಾವರಣ ಸೃಷ್ಟಿಯಾಗಿದೆ. ಇಸ್ಲಾಂ ಹುಟ್ಟುವುದಕ್ಕೆ ಮುಂಚೆಯೇ ಇದ್ದಂತಹ ಸಾವಿರಾರು ವರ್ಷಗಳ ಹಿಂದಿನ ದೇವಸ್ಥಾನಗಳ ಆಸ್ತಿ ಕೂಡಾ ವಕ್ಫ್ ಆಸ್ತಿಯಾಗಿ ಪರಿವರ್ತನೆ ಆಗಿದೆ. ಈ ರೀತಿ ಭೂ ಪರಿವರ್ತನೆ ಮಾಡುವ, ನೋಟಿಸ್ ನೀಡುವ ಅಧಿಕಾರಿಗಳಿಗೂ ಆತ್ಮಸಾಕ್ಷಿ ಬೇಕಿದೆ ಎಂದರು.
ಮೇಯರ್ ಮನೋಜ್ ಕೋಡಿಕಲ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಮೇಯರ್ ಭಾನುಮತಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಬಾಲಕೃಷ್ಣ ಭಟ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ರವಿಶಂಕರ ಮಿಜಾರು, ನಿತಿನ್ ಕುಮಾರ್, ಸುಧೀರ್ ಶೆಟ್ಟಿ, ಪೂರ್ಣಿಮಾ, ವಿಜಯಕುಮಾರ್ ಶೆಟ್ಟಿ, ಮಂಡಲ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ರಾಜೇಶ್ ಕೊಟ್ಟಾರಿ, ಜಗದೀಶ ಆಳ್ವ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post