ಉತ್ತರ ಕನ್ನಡ ಜಿಲ್ಲೆ: ಯಲ್ಲಾಪುರ ನಗರದ ಕಾಳಮ್ಮ ನಗರದ ಆಶ್ರಯ ಬಡಾವಣೆಯ ನಿವಾಸಿ ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆ ರಂಜಿತಾ ಎಂಬವರನ್ನು ರಸ್ತೆ ಮಧ್ಯೆಯೇ ಶನಿವಾರ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರೋಪಿಯನ್ನ ರಫೀಕ್ ಎಂದು ಗುರುತಿಸಿದ್ದು ಆತ ತಲೆಮರೆಸಿಕೊಂಡಿದ್ದ. ಪೊಲೀಸರು ಶ್ವಾನದಳದ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಅರಣ್ಯದಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
“ಮೃತಳ ಸಹೋದರಿ ಅಕ್ಷತಾ ಮಲ್ಲಪ್ಪ ಬನಸೋಡೆ ಅವರು ಪೊಲೀಸರಿಗೆ ದೂರು ನೀಡಿದ್ದರು. ರಂಜಿತಾ ಅವರಿಗೆ ಕಳೆದ ಸುಮಾರು 12 ವರ್ಷಗಳ ಹಿಂದೆ ಸಚೀನ ಕಾಟೇರ ಎಂಬವರೊಂದಿಗೆ ಮದುವೆ ಆಗಿತ್ತು. 10 ವರ್ಷದ ಮಗ ಇದ್ದಾನೆ. ಗಂಡನ ಜೊತೆ ಹೊಂದಾಣಿಕೆ ಆಗದೇ ಸುಮಾರು 4-5 ವರ್ಷಗಳಿಂದ ಮನೆಯವರೊಂದಿಗೆ ವಾಸವಿದ್ದರು. ಬಳಿಕ ವಿಚ್ಛೇದನ ಪಡೆದಿದ್ದರು. ರಂಜಿತಾ ರಾಮಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ರಫೀಕ್ ಇಮಾಮ್ ಸಾಬ ಯಳ್ಳೂರ ಎಂಬವ ರಂಜಿತಾರ ಕ್ಲಾಸ್‌ಮೇಟ್ ಆಗಿದ್ದ. ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಫೋನ್‌ನಲ್ಲಿ ಇಬ್ಬರೂ ಮಾತನಾಡುತ್ತಿದ್ದರು. ರಫಿಕ್ ನನ್ನನ್ನು ಮದುವೆಯಾಗು ಎಂದು ರಂಜಿತಾ ಅವರಿಗೆ ಹೇಳಿದಾಗ ಆಕೆ ಸಂಪರ್ಕ ನಿಲ್ಲಿಸಿದ್ದರು ಎಂದು ಸಹೋದರಿ ದೂರಿನಲ್ಲಿ ತಿಳಿಸಿದ್ದಾರೆ. ರಫೀಕ್ ದ್ವೇಷ ಸಾಧಿಸಿ ರಂಜಿತಾ ಕೆಲಸ ಮುಗಿಸಿ ಮನೆಗೆ ಬರುವ ದಾರಿಯಲ್ಲಿ ಅಡ್ಡಗಟ್ಟಿ ಹರಿತ ಆಯುಧದಿಂದ ಕುತ್ತಿಗೆ ಕೊಯ್ದಿದ್ದಾನೆ. ನಂತರ ಆಕೆಯ ಅಣ್ಣ, ನಾದಿನಿ ಎಲ್ಲರೂ ಸೇರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟರು” ಎಂದು ತಿಳಿಸಿದರು.
ಶನಿವಾರ ಘಟನೆ ನಡೆದ ಬಳಿಕ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿಳಂಬವಾಗಿದೆ ಎಂದು ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇತ್ತ, ಹಿಂದೂ ಯುವತಿಯನ್ನು ಬರ್ಬರವಾಗಿ ಹತ್ಯೆಗೈದಿರುವುದನ್ನು ಖಂಡಿಸಿ ವಿಎಚ್‌ಪಿ ಸಂಘಟನೆ ಯಲ್ಲಾಪುರದಲ್ಲಿ ಇಂದು ಬಂದ್‌ಗೆ ಕರೆ ನೀಡಿತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು. ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು. ಆರೋಪಿ ಬಂಧಿಸುವ ವರೆಗೂ ರಂಜಿತಾಳ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ಆದರೆ, ಈ ಬೆಳವಣಿಗೆಗಳ ನಡುವೆಯೇ ಆರೋಪಿ ರಫೀಕ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Discover more from Coastal Times Kannada
Subscribe to get the latest posts sent to your email.








Discussion about this post