ವಾಷಿಂಗ್ಟನ್: ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕದ ಫೈಟರ್ ಜೆಟ್ ಶನಿವಾರ ಹೊಡೆದುರುಳಿಸಿದೆ ಎಂದು ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ) ತಿಳಿಸಿದೆ. ಇದು ಚೀನಾದಿಂದ ಆಗಿರುವ ಅಮೆರಿಕ ಸಾರ್ವಭೌಮತೆಯ ಉಲ್ಲಂಘನೆ ಎಂದು ಪೆಂಟಗನ್ ಹೇಳಿದೆ.
ಅಮೆರಿಕ ವಾಯು, ಜಲಪ್ರದೇಶದಲ್ಲಿ ಹಾರಾಡುತ್ತಿದ್ದ ಬಲೂನ್ ಅನ್ನು ಒಡೆದುಹಾಕಿದ ಯುದ್ಧ ವಿಮಾನದ ಪೈಲಟ್‌ಗಳನ್ನು ದೇಶದ ಅಧ್ಯಕ್ಷ ಜೋ ಬೈಡನ್ ಅವರು ಅಭಿನಂದಿಸಿದರು. ‘ಫೈಟರ್ ಜೆಟ್‌ಗಳು ಬಲೂನ್ ಅನ್ನು ಯಶಸ್ವಿಯಾಗಿ ಒಡೆದುಹಾಕಿವೆ. ನಮ್ಮ ತಂಡವನ್ನು ನಾನು ಅಭಿನಂದಿಸುತ್ತೇನೆ’ ಎಂದು ಬೈಡನ್ ಅವರು ಮೇರಿಲ್ಯಾಂಡ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಲೂನ್ ಅನ್ನು ಒಡೆಹಾಕಿದ್ದನ್ನು ಸಮರ್ಥಿಸಿಕೊಂಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಇದು ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮ ಎಂದು ಸ್ಪಷ್ಟಪಡಿಸಿದ್ದಾರೆ. ಚೀನಾದಿಂದ ಆಗಿರುವ ನಮ್ಮ ಸಾರ್ವಭೌಮತ್ವದ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಾಚರಣೆಗಾಗಿ ದೇಶದ ಆಗ್ನೇಯ ಭಾಗದ 3 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾರ್ಯಚರಣೆ ಎಂದು ದೇಶದ ವಾಯುಯಾನ ಇಲಾಖೆ ಹೇಳಿತ್ತು. ಕಾರ್ಯಾಚರಣೆಯ ನಂತರ ಬಲೂನ್ ಸಮುದ್ರಕ್ಕೆ ಬೀಳುತ್ತಿರುವುದನ್ನು ಸುದ್ದಿ ಮಾಧ್ಯಮಗಳು ಬಿತ್ತರಿಸಿವೆ. ಬಲೂನ್‌ನಲ್ಲಿರುವ ಸಾಧನಗಳಿಗೆ ಗುಂಡು ಹೊಡೆಯಲು ಅಮೆರಿಕ ಅಧಿಕಾರಿಗಳಿಗೆ ಆರಂಭದಲ್ಲಿ ಇಷ್ಟವಿರಲಿಲ್ಲ. ಇದರಿಂದ ಭೂ ಪ್ರದೇಶದಲ್ಲಿನ ಜನರಿಗೆ ಗಾಯವಾಗಬಹುದು ಅಥವಾ ಆಸ್ತಿಪಾಸ್ತಿಗೆ ಹಾನಿಗೊಳಿಸಬಹುದು ಎಂದು ಆತಂಕ ವ್ಯಕ್ತವಾಗಿತ್ತು. ಸದ್ಯ ಹೊಡೆದುರುಳಿಸಲಾಗಿರುವ ಬಲೂಲ್ ಮತ್ತು ಅದರೊಳಗಿನ ಸಾಧನಗಳನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭವಾಗಿದೆ ಎಂದು ಪೆಂಟಗನ್ ತಿಳಿಸಿದೆ.
ಅಮೆರಿಕ ಹೊಡೆದುರುಳಿಸುವ ಬಲೂನು ಯಾವುದೇ ಬೇಹುಗಾರಿಕೆ ಕಾರ್ಯಕ್ಕೆ ಬಳಕೆಯಾಗುತ್ತಿರಲಿಲ್ಲ. ನಾಗರಿಕ ಸೇವೆ ಉದ್ದೇಶದಿಂದ ಆ ಪ್ರದೇಶದ ಬಳಿ ಹೋಗಿತ್ತು. ಆದರೆ, ಆಕಸ್ಮಿಕವಾಗಿ ಅದು ಅಮೆರಿಕ ಪ್ರದೇಶಕ್ಕೆ ಹಾದು ಹೋಗಿದೆ. ಅಷ್ಟಕ್ಕೆ ಅಮೆರಿಕ ಅತಿರೇಕವಾಗಿ ವರ್ತಿಸಿದೆ. ಅಮೆರಿಕದ ಈ ಕ್ರಮಕ್ಕೆ ತಾನು ಅಷ್ಟೇ ತೀವ್ರವಾಗಿ ಸ್ಪಂದಿಸುವ ಅಧಿಕಾರ ತನಗಿದೆ ಎಂದು ಚೀನಾ ಬೆದಕರಿಕೆ ಹಾಕಿದೆ. ಅಮೆರಿಕಾ-ಚೀನಾ ನಡುವೆ ಬಲೂನ್ ವಾರ್ ಶುರುವಾಗಿದ್ದು, ದೊಡ್ಡಣ್ಣನ ತಾಕತ್ತು ತಿಳಿಯಲು ಕಮ್ಯುನಿಸ್ಟ್ ಹಾರಿಸಿರೋ ಬಲೂನ್ ಇದಾಗಿದೆ ಎಂದು ಹೇಳಲಾಗುತ್ತಿದೆ. ತೈವಾನ್ ವಿಚಾರವಾಗಿ ವಾಗ್ಯುದ್ಧದಲ್ಲಿ ನಿರತವಾಗಿದ್ದ ಎರಡೂ ರಾಷ್ಟ್ರಗಳು ರಣಾಂಗಣದಲ್ಲಿ ಮುಖಾಮುಖೀಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post