ಮಂಗಳೂರು: ಹಲವು ಕ್ಷೇತ್ರಗಳಲ್ಲಿ ಪಿತೃಪ್ರಧಾನ ವ್ಯವಸ್ಥೆ ಆಳವಾಗಿ ಬೇರೂರಿ ರುವ ಭಾರತದಲ್ಲಿ ಈಚೆಗೆ ಉದ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆದರೂ ಲಿಂಗತ್ವ ಅಸಮಾನತೆಯ ಅಂತರ ದೊಡ್ಡದಾಗಿಯೇ ಉಳಿದಿದೆ. ಇದನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂದು ತಕ್ವಾ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಅಸ್ಮಾ ಮೊಹಮ್ಮದ್ ಅಸಫ್ ಸಲಹೆ ನೀಡಿದರು.
ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ನಗರದ ಪುರಭವನದಲ್ಲಿ ಆಯೋಜಿಸಿರುವ ಬ್ಯಾರಿ ಮೇಳದ ಎರಡನೇ ದಿನವಾದ ಶನಿವಾರ ನಡೆದ ಮಹಿಳಾ ಉದ್ಯಮಿಗಳ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು. ಕಾಲಕ್ಕೆ ತಕ್ಕಂತೆ ಬದಲಾಗಿರುವ ಭಾರತೀಯ ಮಹಿಳೆ ಉದ್ಯಮದಲ್ಲಿ ಛಾಪು ಮೂಡಿಸಿದ್ದಾಳೆ. ಪಿತೃಪ್ರಧಾನ ಸಮಾಜದಲ್ಲಿ ಇಂಥ ಸಾಧನೆ ಮಾಡುವುದು ಕಷ್ಟಸಾಧ್ಯ ಮಾತ್ರವಲ್ಲ, ಸವಾಲಿನದ್ದು ಕೂಡ. ಆದ್ದರಿಂದ ಮಹಿಳಾ ಉದ್ಯಮಿಗಳು ಅಭಿನಂದನಾರ್ಹರು. ಮಹಿಳೆ ಭಾವುಕಳು, ಮಹತ್ವಾಕಾಂಕ್ಷೆ ಇಲ್ಲದವಳು ಎಂಬೆಲ್ಲ ಮಾತುಗಳು ಕೇಳಿಬರುವ ಸಮಾಜದಲ್ಲಿ ಆಕೆಗೆ ಅದನ್ನೆಲ್ಲ ಮೀರಿ ನಿಲ್ಲುವ ಸಾಮರ್ಥ್ಯ ಇದೆ ಎಂಬುದು ಈಗ ಸಾಬೀತಾಗಿದೆ ಎಂದು ಅಸ್ಮಾ ಹೇಳಿದರು.
ಕೆಲಸದ ಜಾಗದಲ್ಲಿ ಲಿಂಗತ್ವ ಅಂತರದ ವಿಷಯಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಗಮನಿಸಿದರೆ 2022ರಲ್ಲಿ ಭಾರತ 135ನೇ ಸ್ಥಾನದಲ್ಲಿದೆ. ಇದು ಇನ್ನಷ್ಟು ಬೆಳೆಯಲು ಬಿಡಬಾರದು. ಬದಲಾವಣೆಯ ಗಾಳಿ ಬೀಸಲು ಆರಂಭವಾಗಿದ್ದು ಅದು ಇನ್ನಷ್ಟು ವೇಗ ಪಡೆದುಕೊಳ್ಳಬೇಕು. ಮಹಿಳೆಯರ ಸಾಧನೆಯನ್ನು ಹಾಡಿ ಹೊಗಳುವ ಸಂದರ್ಭದಲ್ಲಿ ಅದಕ್ಕಾಗಿ ಅವರು ಅನುಭವಿಸಿದ ನೋವು ಮತ್ತು ಹೋರಾಡಿದ ಪರಿಯನ್ನು ಕೂಡ ಗಮನದಲ್ಲಿ ಇರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಆರೋಗ್ಯದ ಬಗ್ಗೆ ಡಾ.ಮರಿಯಂ ಅಂಜುಮ್ ಇಫ್ತಿಕರ್ ಮಾತನಾಡಿದರು. ರೂಹ್ಲ್ ಜಮೀರ್, ಶಾಹಿದಾ ಮತ್ತು ರೂಪಾ ಫಾತಿಮಾ ವಿಚಾರ ಮಂಡಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post