ಮಂಗಳೂರು: ಕಳೆದ ತಿಂಗಳು ಹಾಡುಹಗಲೇ ನಗರದ ಜುವೆಲ್ಲರಿ ಅಂಗಡಿಗೆ ನುಗ್ಗಿ ಸೇಲ್ಸ್‌ಮ್ಯಾನ್‌ನ್ನು ಹತ್ಯೆಗೈದಿದ್ದ ಆರೋಪಿ ಶಿಫಾಸ್(30) ಒಬ್ಬರೇ ಇರುವ ಚಿನ್ನಾಭರಣ ಅಂಗಡಿಗಳನ್ನು ಗುರಿಯಾಗಿಟ್ಟುಕೊಂಡು ಹೊಂಚು ಹಾಕುತ್ತಿದ್ದ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾ.2ರಂದು ಕಾಸರಗೋಡು ಪೊಲೀಸರು ಶಂಕೆ ಮೇರೆಗೆ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆನಂತರ, ನಮ್ಮ ಮಂಗಳೂರಿನ ಪೊಲೀಸರ ತಂಡ ಅಲ್ಲಿಗೆ ತೆರಳಿ ತನಿಖೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಆರೋಪಿ ಶಿಫಾಸ್ ಕ್ಯಾಲಿಕಟ್ ನಿವಾಸಿಯಾಗಿದ್ದು, ಇದೇ ರೀತಿ ಕರ್ನಾಟಕ, ಕೇರಳ, ತಮಿಳುನಾಡಿನ ಗಡಿಭಾಗದಲ್ಲಿ ದರೋಡೆ ನಡೆಸುವ ಉದ್ದೇಶ ಹೊಂದಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ. ಈ ಹಿಂದೆ ಇಂತಹ ಕೃತ್ಯ ಎಸಗಿದ್ದಾನೆಯೇ ಅನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದರು.
ಕೊಲೆಗೈದು ನಡೆದುಕೊಂಡೇ ಹೋಗಿದ್ದ ಆರೋಪಿ ; ಆರೋಪಿ ಶಿಫಾಝ್ ಮಂಗಳೂರು ಜ್ಯುವೆಲರ್ಸ್ ಅಂಗಡಿ ಸಿಬ್ಬಂದಿ ರಾಘವೇಂದ್ರ ಆಚಾರ್ಯನನ್ನು ಕೊಲೆಗೈದು ಒಂದಷ್ಟು ದೂರ ನಡೆದುಕೊಂಡೇ ಹೋಗಿ ಅಲ್ಲಿಂದ ರಿಕ್ಷಾ ಬಳಸಿ ನಗರದ ಹೊರವಲಯಕ್ಕೆ ತಲುಪಿ ಬಸ್ ಮೂಲಕ ಕಾಸರಗೋಡಿಗೆ ಹೋಗಿದ್ದನು.
ಕಾಸರಗೋಡಿನಿಂದ ರೈಲಿನ ಮೂಲಕ ಕೊಚ್ಚಿಗೆ ಕಾಲ್ಕಿತ್ತಿದ್ದನು ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಸದ್ಯ ಈ ಬಂಧಿತ ಆರೋಪಿಯ ವಿರುದ್ದ ಪ್ರಕರಣಗಳು ದಾಖಲಾದ ಬಗ್ಗೆ ಮಾಹಿತಿಯಿಲ್ಲ. ಇದೀಗ ಈ ಬಗ್ಗೆ ನೆರೆರಾಜ್ಯ ಹಾಗೂ ಉಳಿದ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಬ್ಯಾಗ್‌ನಿಂದ ಗುರುತು : ಆರೋಪಿಯ ಪತ್ತೆ ಸವಾಲಾಗಿತ್ತು. ಆತನ ಮುಖಚರ್ಯೆ ಸ್ಪಷ್ಟವಾಗಿ ಯಾವುದೇ ಸಿಸಿ ಕೆಮರಾದಲ್ಲಿ ದಾಖಲಾಗಿರಲಿಲ್ಲ. ಹಾಗಾಗಿ ಆತನ ಚಹರೆ, ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ಚಿತ್ರಗಳನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಾರ್ವಜನಿಕರಿಂದ ಮಾಹಿತಿ ಕೋರಲಾಗಿತ್ತು. ಇದನ್ನು ಗಮನಿಸಿದ ಕಾಸರಗೋಡಿನ ಪೊಲೀಸರು ಓರ್ವ ಶಂಕಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದು ಮಾಹಿತಿ ನೀಡಿದ್ದರು. ಆತ ಧರಿಸಿದ್ದ ಬ್ಯಾಗ್‌ನ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದರು. ಬಳಿಕ ಮಂಗಳೂರು ಪೊಲೀಸರು ವಿಚಾರಿಸಿದಾಗ ಆತನೇ ಆರೋಪಿ ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದರು.
ರಕ್ತದ ಕಲೆ ಸಿಗದಿರಲು 2-3 ಬಟ್ಟೆ : ತಾನು ಚೂರಿಯಿಂದ ಇರಿದ ಅನಂತರ ತನ್ನ ಬಟ್ಟೆ ಮೇಲೆ ರಕ್ತ ಚೆಲ್ಲುವುದರಿಂದ ಬಟ್ಟೆಯನ್ನು ಎಲ್ಲಿಯಾದರೂ ಬಿಸಾಡಿ ಹೋಗುವುದು ಆರೋಪಿಯ ಯೋಚನೆಯಾಗಿತ್ತು. ಅದಕ್ಕಾಗಿ 3-4 ಬಟ್ಟೆಗಳನ್ನು ಒಂದರ ಮೇಲೆ ಒಂದರಂತೆ ಧರಿಸುತ್ತಿದ್ದ. ಕಾಸರಗೋಡಿನಲ್ಲಿ ವಶಕ್ಕೆ ಪಡೆಯುವಾಗಲೂ ಅದೇ ರೀತಿ ಬಟ್ಟೆ ಧರಿಸಿದ್ದ. ಆತ ಕಾಸರಗೋಡಿನಲ್ಲಿ ಅಂತಹುದೇ ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದುದು ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಪೊಲೀಸರಿಗೆ ಅಭಿನಂದನೆ : ಕಾರ್ಯಾಚರಣೆಯಲ್ಲಿ ಮಂಗಳೂರಿನ ಡಿಸಿಪಿ ಅಂಶುಕುಮಾರ್ ಅವರ ನೇತೃತ್ವದ 8 ಪೊಲೀಸ್ ತಂಡ ಹಾಗೂ ಕಾಸರಗೋಡು ಡಿವೈಎಸ್‌ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡ ಪಾಲ್ಗೊಂಡಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಪೊಲೀಸ್ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಆಯುಕ್ತರು ಗೌರವಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post