ಮಂಗಳೂರು, ಮಾ.5: ನಗರದ ಸ್ಟೇಟ್ ಬ್ಯಾಂಕ್ ವೃತ್ತದಲ್ಲಿರುವ ಮೀನು ಮಾರುಕಟ್ಟೆಗೆ ತೆರಳಿ, ಅಲ್ಲಿನ ಮೀನು ಮಾರಾಟದ ಮಹಿಳೆಯರ ಅಹವಾಲು ಆಲಿಸಿದರು. ಈ ವೇಳೆ, ಮೀನುಗಾರ ಮಹಿಳೆಯರು ತಮ್ಮ ಕಷ್ಟ ಹೇಳಿಕೊಂಡರಲ್ಲದೆ, ನೂತನ ಸೆಂಟ್ರಲ್ ಮಾರುಕಟ್ಟೆಗೆ ಹೋಗುವುದಿಲ್ಲ. ಅಲ್ಲಿ ದುಬಾರಿ ಬಾಡಿಗೆ ಮಾಡಿದ್ದಾರೆ. ನಮಗೆ ಇಲ್ಲಿಯೇ ಸುಸಜ್ಜಿತ ಮಾರುಕಟ್ಟೆ ಮಾಡಿಕೊಡಬೇಕು ಎಂದು ಹೇಳಿದರು. ನಾಡಿದ್ದು ಮೀನುಗಾರ ಮಹಿಳೆಯರ ಜೊತೆಗೆ ಮೀಟಿಂಗ್ ಇಟ್ಟಿದ್ದೇನೆ, ನೀವು ಬಂದು ದೂರು ಕೊಟ್ಟರೆ ಈ ಬಗ್ಗೆ ಜಿಲ್ಲಾಧಿಕಾರಿ ಮಾತ್ರವಲ್ಲದೆ ಸರಕಾರದ ಗಮನಕ್ಕೂ ತರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಭೇಟಿಯಲ್ಲಿರುವ ಅವರು ಗುರುವಾರ ಮಧ್ಯಾಹ್ನ ಸ್ಟೇಟ್ ಬ್ಯಾಂಕ್ ನಲ್ಲಿರುವ ಹಸಿ ಮತ್ತು ಒಣ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಸ್ಟೇಟ್ ಬ್ಯಾಂಕ್ ಹಸಿ ಮೀನು ಮಾರುಕಟ್ಟೆಯಲ್ಲಿ ತಾವು ಹಲವು ದಶಕಗಳಿಂದ ವ್ಯಾಪಾರ ಮಾಡುತ್ತಿದ್ದು, ಇಲ್ಲಿಯೇ ವ್ಯಾಪಾರಕ್ಕೆ ಅವಕಾಶ ಮಾಡುವಂತೆ ಮಹಿಳೆಯರು ತಮ್ಮ ಬೇಡಿಕೆ ಇರಿಸಿದ್ದಾರೆ. ನೂತನವಾಗಿ ನಿರ್ಮಿಸಲಾಗಿರುವ ಮಾರುಕಟ್ಟೆಯಲ್ಲಿ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆಯ ಕೊರತೆಯ ಜತೆಗೆ ಬಾಡಿಗೆಯೂ ದುಬಾರಿಯಾಗಿದೆ ಎಂದು ಹೇಳಿದ್ದಾರೆ. ದ.ಕ. ಜಿಲ್ಲಾಧಿಕಾರಿ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ನಾಳೆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಲಿದ್ದೇನೆ. ಸಮಸ್ಯೆಯನ್ನು ಆಡಳಿತದ ಗಮನಕ್ಕೆ ತರುವ ನಿಟ್ಟಿನಲ್ಲಿ ಮಹಿಳಾ ಮೀನುಗಾರ ಪ್ರತಿನಿಧಿಗಳೂ ಭಾಗವಹಿಸುವಂತೆ ಕೋರಿದ್ದೇನೆ. ಮೀನುಗಾರ ಮಹಿಳೆಯರು ಲಿಖಿತವಾಗಿ ನೀಡುವ ಬೇಡಿಕೆಗಳ ಕುರಿತಂತೆ, ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ಒಣ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ವೇಳೆ ಮೀನುಗಾರ ಮಹಿಳೆಯಾದ ರವಿಕಲಾ ಎಂಬವರು ಮಾತನಾಡಿ, ಈಗಾಗಲೇ ಹೊಸ ಮಾರುಕಟ್ಟೆಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಆದರೆ ಅಲ್ಲಿ ಒಂದು ಮೂಲೆಯಲ್ಲಿ ಒಣ ಮೀನುಗಾರರಿಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವ್ಯಾಪಾರ ನಷ್ಟದಿಂದ ಸಂಕಷ್ಟದಲ್ಲಿರುವ ಮಹಿಳೆಯರು ಅವ್ಯವಸ್ಥಿತ ಜಾಗದಲ್ಲಿ ವ್ಯಾಪಾರ ಮಾಡಲು ಕಷ್ಟವಾಗಲಿದೆ ಎಂದರು.
ಶೌಚಾಲಯಕ್ಕೆ ದುಡ್ಡು ಕೊಡಬೇಕು! ಸ್ಟೇಟ್ ಬ್ಯಾಂಕ್ ಬಳಿ ಮೀನುಗಾರ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇದ್ದರೂ ಅದಕ್ಕೆ ದುಡ್ಡು ತೆರಬೇಕು. ಕುಡಿಯಲು ನೀರನ್ನು ಹೊಟೇಲ್ಗಳಿಂದ ತರಬೇಕು. ಮಾರುಕಟ್ಟೆ ಸ್ವಚ್ಛತೆಗೆ ನೀರಿನ ಸಮಸ್ಯೆ ಇದೆ ಎಂದು ಮಹಿಳಾ ಮೀನುಗಾರರು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿಯವರೊಂದಿಗೆ ಸಮಸ್ಯೆ ಹಂಚಿಕೊಂಡರು.
Discover more from Coastal Times Kannada
Subscribe to get the latest posts sent to your email.







Discussion about this post