ಉಳ್ಳಾಲ, ಮಾ.5: ಅರಣ್ಯಾಧಿಕಾರಿಯೋರ್ವರು ನೆಲೆಸಿದ್ದ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಸೇರಿದಂತೆ ಹತ್ತೂವರೆ ಲಕ್ಷ ರೂಪಾಯಿ ನಗದು,181 ಗ್ರಾಂ ಚಿನ್ನ ಮತ್ತು ಬೆಳ್ಳಿಯನ್ನು ದೋಚಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಂಬಿಕಾರೋಡ್, ಕಾಪಿಕಾಡು ಎಂಬಲ್ಲಿ ನಡೆದಿದೆ.
ಕೋಟೆಕಾರು ಉಪ ವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ ಅವರು ವಾಸವಿದ್ದ ಅಂಬಿಕಾರೋಡ್ ಕಾಪಿಕಾಡಿನ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆದಿದ್ದು ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಅರಣ್ಯಾಧಿಕಾರಿ ಮೆಹಬೂಬ್ ಸಾಬ್(35) ಅವರು ತನ್ನ ಪತ್ನಿ ಫರ್ಝಾನ ಮೆಹಬೂಬ್ ಮತ್ತು ಪುಟ್ಟ ಮಗುವಿನೊಂದಿಗೆ ಕಾಪಿಕಾಡುವಿನ ಬಾಡಿಗೆ ಮನೆಯಲ್ಲಿ ಕಳೆದ ಆರು ತಿಂಗಳುಗಳಿಂದ ವಾಸವಿದ್ದರು. ಕಳೆದ ಶುಕ್ರವಾರ ಮಧ್ಯಾಹ್ನ ಮೆಹಬೂಬ್ ಅವರು ಕುಟುಂಬದೊಂದಿಗೆ ತನ್ನ ಊರು ಕೊಪ್ಪಳಕ್ಕೆ ತೆರಳಿದ್ದರು. ಇಂದು ಬೆಳಗ್ಗೆ ಒಂಬತ್ತು ಗಂಟೆ ವೇಳೆಗೆ ಮೆಹಬೂಬ್ ಅವರು ತನ್ನ ಕುಟುಂಬ ಸಮೇತ ಕಾಪಿಕಾಡಿನ ಮನೆಗೆ ವಾಪಸಾದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯೊಳಗೆ ನುಗ್ಗಿದ ಕಳ್ಳರು ಹಾಲ್ ಮತ್ತು ಎರಡು ಕೋಣೆಯೊಳಗಿನ ಕಪಾಟುಗಳನ್ನ ಜಾಲಾಡಿದ್ದು, ಲಾಕರ್ ಗಳಲ್ಲಿದ್ದ 181 ಗ್ರಾಂ ಚಿನ್ನ, ಮಗುವಿನ ಬೆಳ್ಳಿಯ ಆಭರಣಗಳು ಹಾಗೂ ಮೆಹಬೂಬ್ ಅವರು ಬ್ಯಾಂಕಿನಿಂದ ಸಾಲ ಪಡೆದಿದ್ದ ಹತ್ತೂವರೆ ಲಕ್ಷ ರೂಪಾಯಿ ನಗದನ್ನ ದೋಚಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post