ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಬ್ಯಾಂಕು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತನ್ನ 113 ಶಾಖೆಗಳ ಮೂಲಕ ಆರ್ಥಿಕ ವರ್ಷದಲ್ಲಿ ಅಮೋಘ ಸಾಧನೆಯನ್ನು ಗೈದಿದೆ. 2026ರ ಮಾರ್ಚ್ ತಿಂಗಳ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.131.14ಕೋಟಿ ಲಾಭ ಗಳಿಸಿದೆ. ಇದು ಕಳೆದ ವರ್ಷದ ಲಾಭ (ರೂ.110.41 ಕೋಟಿ) ಕ್ಕಿಂತ ಶೇಕಡಾ 18.78% ಏರಿಕೆಯಾಗಿದೆ. ಇದು ರಾಜ್ಯದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಪೈಕಿ ಸಾರ್ವಕಾಲಿಕ ದಾಖಲೆ ಲಾಭಗಳಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಮಂಗಳೂರು ಇದರ ಅಧ್ಯಕ್ಷರಾದ ಡಾ। ಎಂ.ಎನ್. ರಾಜೇಂದ್ರ ಕುಮಾರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಬ್ಯಾಂಕಿನ ಅನುತ್ಪಾದಕ ಆಸ್ತಿಯ ಪ್ರಮಾಣವು ಶೇ.2.42 ನಿಂದ ಶೇ.2.21 ಪ್ರಮಾಣಕ್ಕೆ ಇಳಿಕೆಯಾಗಿದೆ. ಇದು ಬ್ಯಾಂಕಿನ ಪ್ರಗತಿಯನ್ನು ಸೂಚಿಸುತ್ತದೆ ಎಂದು ಡಾ। ಎಂ.ಎನ್. ರಾಜೇಂದ್ರ ಕುಮಾರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 112 ವರ್ಷಗಳ ಸಮೃದ್ಧ ಪರಂಪರೆಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶಿಷ್ಟ ಹಾಗೂ ವಿನೂತನ ಸೇವೆ ಗಳನ್ನು ಅಳವಡಿಸಿಕೊಂಡು ದೇಶಕ್ಕೆ ಮಾದರಿಯಾಗಿದೆ. ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಬ್ಯಾಂಕ್ ಕೋರ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ನಂತಹ ಉತೃಷ್ಣ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆಗೆ ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಮೂಲಕ ಯು.ಪಿ.ಐ. (UPI) ಮತ್ತು ಐ.ಎಮ್.ಪಿ.ಎಸ್. (IMPS) ಸೌಲಭ್ಯಗಳನ್ನು ಅಳವಡಿಸಿಕೊಂಡು ಗಣನೀಯ ಪ್ರಗತಿಯನ್ನು ಕಂಡಿದೆ.
ದಾಖಲೆಯ ರೂ.20226.19 ಕೋಟಿ ವ್ಯವಹಾರ, ದಾಖಲೆಯ ರೂ. 131.14 ಕೋಟಿ ಲಾಭ :-ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವ ಹಿಸುತ್ತಿರುವ ಎಸ್ ಸಿಡಿಸಿಸಿ ಬ್ಯಾಂಕ್ ಗ್ರಾಹಕರನ್ನು ಹೆಚ್ಚು ಆಕರ್ಷಿ ಸುತ್ತಿದ್ದು, 2025-26ನೇ ವರದಿ ವರ್ಷದಲ್ಲಿ ರೂ.20226.19 ಕೋಟಿ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕೆ (ರೂ.17366.68 ಕೋಟಿ) ಹೋಲಿಸಿದರೆ ಈ ಬಾರಿ ಶೇ.16.47% ಏರಿಕೆಯನ್ನು ಕಂಡು ರಾಜ್ಯದಲ್ಲೇ ಹೊಸ ದಾಖಲೆಯನ್ನು ನಿರ್ಮಿಸಿದೆ. 2026-27ನೇ ಸಾಲಿಗೆ ರೂ.22500.00 ಕೋಟಿ ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
9264.64 ಕೋಟಿ ರೂ. ಠೇವಣಿ ಸಂಗ್ರಹ; ಠೇವಣಿಗಳ ಸಂಗ್ರಹಣೆಯಲ್ಲಿ ಎಲ್ಲಾ ಬ್ಯಾಂಕ್‌ಗಳಲ್ಲೂ ಸ್ಪರ್ಧೆ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ತನ್ನ 113 ಶಾಖೆಗಳ ಮುಖಾಂತರ ಒಟ್ಟು ರೂ.9264.64 ಕೋಟಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ. ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಣೆಗಿಂತ ಈ ಬಾರಿ ಶೇ.17.53 ಹೆಚ್ಚಾಗಿದೆ.
ಸ್ಪರ್ಧಾತ್ಮಕ ವ್ಯವಹಾರದಲ್ಲಿ ನ್ಯಾಂಕ್ ರೂ.9766.75 ಕೋಟಿ ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ರೂ.2106.5೦ ಕೋಟಿ ರೂಪಾಯಿ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ ರೂ.10961.5ರ ಕೋಟಿಯಾಗಿರುತ್ತದೆ.ಸತತ 31 ವರ್ಷಗಳಿಂದ ಕೃಷಿ ಸಾಲ ಮರು ಪಾವತಿಯಲ್ಲಿ ಶೇಕಡಾ 100ರ ಸಾಧನೆ ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ 100ರ ಮರುಪಾವತಿಯನ್ನು ಕಂಡು ದಾಖಲೆ ನಿರ್ಮಿಸಿ ಸಾಧನೆಗೈದಿದೆ. ಇಂತಹ ಸಾಧನೆಯನ್ನು ಕಳೆದ 31 ವರ್ಷಗಳಿಂದ ಬ್ಯಾಂಕ್ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ.
“ರುಪೇ” (RuPay) ಕಿಸಾನ್ ಕ್ರೆಡಿಟ್ ಕಾರ್ಡ್ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ ರೈತರಿಗೆ ಬ್ಯಾಂಕ್ ರುಪೇ (RuPay) ಕಿಸಾನ್ ಕಾರ್ಡ್‌ನ್ನು ನೀಡಿದೆ. ಈಗಾಗಲೇ 1,44,701 ರುಪೇ ಕಿಸಾನ್ ಕಾರ್ಡ್ ಗಳನ್ನು ರೈತರಿಗೆ ವಿತರಿಸಲಾಗಿದೆ. 92,531 ರುಪೇ ಡೆಬಿಟ್ ಕಾರ್ಡ್ ಗಳನ್ನು ಬ್ಯಾಂಕ್‌ನ ಇತರ ಗ್ರಾಹಕರಿಗೆ ನೀಡಲಾಗಿದೆ.
ಸುದ್ದಿ ಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಎಂ. ವಾದಿರಾಜ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್ , ಶಶಿಕುಮಾರ್ ರೈ ಬಾಲ್ಯೊಟ್ಟು,ದೇವಿಪ್ರಸಾದ್ ಶೆಟ್ಟಿ ಬೆಳಪು, ಅಶೋಕ್ ಕುಮಾರ್ ಶೆಟ್ಟಿ, ಎಂ.ಮಹೇಶ್ ಹೆಗ್ಡೆ , ಮೋನಪ್ಪ ಶೆಟ್ಟಿ ಎಕ್ಕಾರು, ಜೈರಾಜ್ ಬಿ.ರೈ ,ಸದಾಶಿವ ಉಳ್ಳಾಲ್, ರಾಜೇಶ್ ರಾವ್,ಎಸ್.ಎನ್. ಮನ್ಮಥ, ಕುಶಾಲಪ್ಪ ಗೌಡ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲ ಕೃಷ್ಣ ಭಟ್ ಕೆ., ಇವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post