ಮಂಗಳೂರು, ಜೂನ್ 4 : ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಾಕಿ, ಸಮಾಜದ ನೆಮ್ಮದಿಗೆ ಭಂಗವನ್ನುಂಟು ಮಾಡಲು ಪ್ರಯತ್ನಿಸಿದ ಆರೋಪಿಗಳ ಪತ್ತೆಗಾಗಿ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದು, ಪ್ರಕರಣಗಳನ್ನು ದಾಖಲಿಸಿ ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದೆ.
ಹೆಜಮಾಡಿಯ ಅಸ್ಲಾಂ (23 ), ಕಾಟಿಪಳ್ಳದ ಚೇತನ್ (20), ಹಳೆಯಂಗಡಿ ನಿತಿನ್ ಅಡಪ (23), ಫರಂಗಿಪೇಟೆಯ ರಿಯಾಝ್ ಇಬ್ರಾಹೀಂ (30), ಕಸಬಾ ಬೆಂಗ್ರೆಯ ಜಮಾಲ್ ಝಕೀರ್(21) ಮತ್ತು ಕೊಳವೈಲ್‌ನ ಗುರುಪ್ರಸಾದ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಅಸ್ಲಾಂ ಎಂಬಾತನು ಸೌದಿ ಅರೇಬಿಯಾದಿಂದ team_jokerzzz._ ಎಂಬ ಇನ್‌ಸ್ಟಾಗ್ರಾಂ ಮೂಲಕ ಪ್ರಚೋದನಾಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ.192, 353 (2)ರಂತೆ ಪ್ರಕರಣ ದಾಖಲಾಗಿತ್ತು. ಆರೋಪಿ ಅಸ್ಲಾಂ ವಿರುದ್ಧ ಎಲ್‌ಒಸಿ ಹೊರಡಿಸಿ, ದಸ್ತಗಿರಿ ಮಾಡಲಾಗಿದೆ.
ಚೇತನ್ ಎಂಬಾತನು ಮುಸ್ಲಿಂ ಹೆಸರಿನ ಸಿಮ್ ಕಾರ್ಡ್ ನ್ನು ಬಳಸಿಕೊಂಡು team_karna_surathkal ಇನ್‌ಸ್ಟಾಗ್ರಾಂ ಪೇಜ್‌ನ್ನು ತೆರೆದಿದ್ದು, ಈ ಪೇಜ್‌ನಲ್ಲಿ ಚೆನ್ನಪ್ಪ ಯಾನೆ ಮುತ್ತು ಸುರತ್ಕಲ್ ಎಂಬಾತನು ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ. 196(1), 353(2) ರಂತೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಚೇತನ್ ಮತ್ತು ನಿತಿನ್ ಅಡಪ ಎಂಬವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿಡಲಾಗಿದೆ.
ರಿಯಾಝ್ ಇಬಾಹೀಂ ಎಂಬಾತನು ಸೌದಿ ಅರೇಬಿಯಾದಿಂದ Beary_royal_nawab ಎಂಬ ಇನ್‌ಸ್ಟಾಗ್ರಾಮ್ ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ. 353 (2) ರಂತೆ ಮತ್ತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ.353 (1) (ಸಿ), 353(2) ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ. ಈತನನ್ನು ಎಲ್‌ಒಸಿ ಹೊರಡಿಸಿ ದಸ್ತಗಿರಿ ಮಾಡಲಾಗಿದೆ.
ಆರೋಪಿ ಜಮಾಲ್ ಝಾಕೀರ್ Troll_bengare_ro_makka ಇನ್‌ಸ್ಟಾಗ್ರಾಮ್ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಲಂ ಬಿಎನ್‌ಎಸ್ 353 (1) (ಸಿ), 353(2) ಸಂಹಿತೆಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ
ಗುರು ಪ್ರಸಾದ್ ಎಂಬಾತನು Guru dprasad Haleyangadi ಎಂಬ ಫೇಸ್ ಬುಕ್ ಖಾತೆಯ ಮುಖಾಂತರ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ.196(1) (ಎ),353(2),79,56 ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಗಳಲ್ಲಿ ಸಮಾಜದ ಶಾಂತಿ, ನೆಮ್ಮದಿಗೆ ಭಂಗವನ್ನುಂಟು ಮಾಡಲು ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸಿ, ಸಮಾಜದ ಶಾಂತಿ ನೆಮ್ಮದಿಗೆ ಅಪಾಯವುಂಟು ಮಾಡುವ ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವ್ಯಕ್ತಿಗಳ ಪತ್ತೆಗಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರು ವಿಶೇಷ ತಂಡ ರಚನೆ ಮಾಡಿದ್ದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, , ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್ ಮತ್ತು ರವಿಶಂಕರ್ (ಅ ಮತ್ತು ಸಂ) ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡಗಳಿಂದ ತನಿಖೆ ಮುಂದುವರೆಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟನೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post