ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಂಬಿಕಾರೋಡ್ ಮೂರನೇ ಅಡ್ಡ ರಸ್ತೆಯ ರಾಜ ಕಾಲುವೆಯ ಕಿರು ಸೇತುವೆಯ ಅಡಿ ಭಾಗ ಬುಧವಾರ ಸಂಜೆ ವೇಳೆಗೆ ಕುಸಿತಗೊಂಡಿದೆ. ಸುರಕ್ಷತೆ ದೃಷ್ಟಿಯಿಂದ ಸೇತುವೆ ಸಂಚಾರವನ್ನ ಸೋಮೇಶ್ವರ ಪುರಸಭಾ ಅಧಿಕಾರಿಗಳು ನಿಷೇಧಗೊಳಿಸಿದ್ದು ಸ್ಥಳೀಯ ಅಂಬಿಕಾರೋಡ್ ಲೇ ಔಟ್ ನ ಸುಮಾರು ಎಪ್ಪತ್ತು ಮನೆಗಳ ಸಂಪರ್ಕ ಕಡಿತವಾಗಿ ನಿವಾಸಿಗಳು ಮನೆ ತಲುಪಲು ಬವಣೆ ಪಡುವಂತಾಗಿದೆ.
ಅಂಬಿಕಾರೋಡ್ ಮೂರನೇ ಅಡ್ಡ ರಸ್ತೆಯ ರಾಜ ಕಾಲುವೆಯ ಕಿರು ಸೇತುವೆ ಹಳೆಯದಾಗಿದ್ದು ಕಳೆದ ನಾಲ್ಕು ವರ್ಷದ ಹಿಂದಷ್ಟೆ ಸೋಮೇಶ್ವರ ಪುರಸಭೆ ಆಡಳಿತವು ಸೇತುವೆಯ ದುರಸ್ತಿ ಕಾರ್ಯ ನಡೆಸಿತ್ತು. ಸೇತುವೆಯ ಕಳಪೆ ದುರಸ್ತಿಯಿಂದಾಗಿ ಕಳೆದ ಗುರುವಾರ ಸುರಿದ ಭಾರೀ ಮಳೆಗೆ ಕಾಲುವೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಅಡಿಭಾಗವು ಕುಸಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಕೆಲವರು ಸ್ಥಳೀಯ ಅಂಬಿಕಾರೋಡ್ ಲೇ ಔಟ್ ನಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ರಾಜಕಾಲುವೆಯ ಕಿರು ಸೇತುವೆಯ ಮೇಲೆ ದಿನ ನಿತ್ಯಲೂ ಕಲ್ಲು , ಮರಳು ಇತರ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಘನ ವಾಹನಗಳು ಚಲಿಸುತ್ತಿದ್ದ ಪರಿಣಾಮ ಹಳೆ ಸೇತುವೆ ಶಿಥಿಲಗೊಂಡು ಕುಸಿದಿರೋದಾಗಿ ಆರೋಪಿಸಿದ್ದಾರೆ.
ಮತ್ತೆ ಧಾರಾಕಾರವಾಗಿ ಮಳೆ ಸುರಿದರೆ ಸೇತುವೆ ಸಂಪೂರ್ಣ ಕುಸಿದು ಬಿದ್ದು ನೀರು ಸ್ಥಳೀಯ ಅನೇಕ ಮನೆಗಳಿಗೆ ನುಗ್ಗಿ ಮತ್ತೆ ಅವಾಂತರ ಸೃಷ್ಟಿಸುವ ಭೀತಿ ಎದುರಾಗಿದೆ. ಸ್ಥಳಕ್ಕೆ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಮತ್ತು ಪ್ರಬಂಧಕರಾದ ಕೃಷ್ಣ, ಸ್ಥಳೀಯ ಪುರಸಭೆ ಸದಸ್ಯರಾದ ಪರ್ವೀಣ್ ಅವರು ಭೇಟಿ ನೀಡಿದ್ದು ಪರಿಸ್ಥಿತಿ ಪರಿಶೀಲನೆ ನಡೆಸಿದರು. ಇದೀಗ ಕುಸಿದಿರುವ ಸೇತುವೆ ಬೀಳದಂತೆ ತಡೆಯುವುದೇ ಅಧಿಕಾರಿಗಳಿಗೆ ಸವಾಲಾಗಿದೆ.
ಇನ್ನೊಂದೆಡೆ ಕುಂಪಲ ಮುಖ್ಯ ರಸ್ತೆಯು ಪೈಪ್ ಲೈನ್ ಕಾಮಗಾರಿಯಿಂದ ಕೆಟ್ಟು ಹೋಗಿದ್ದು,ದುರಸ್ಥಿ ಕಾಮಗಾರಿಗೆಂದು ಅಲ್ಲಿನ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಕುಂಪಲ ಪ್ರದೇಶಕ್ಕೆ ತೆರಳುವವರೂ ಕೂಡ ಅಂಬಿಕಾ ರೋಡಿನ ಮೂರನೇ ಅಡ್ಡ ರಸ್ತೆಯನ್ನೇ ಪರ್ಯಾಯವಾಗಿ ನೆಚ್ಚಿಕೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post