ಮಂಗಳೂರು, ಡಿ.4 : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಮಸಕಟ್ಟೆ ನಿವಾಸಿಗಳಾದ ವೃದ್ಧ ದಂಪತಿ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಬಿದ್ದು ತಮ್ಮ ಖಾತೆಯಲ್ಲಿದ್ದ 84 ಲಕ್ಷವನ್ನು ಸೈಬರ್ ವಂಚಕರಿಗೆ ನೀಡಲು ಹೋಗಿ ಬ್ಯಾಂಕ್ ಮ್ಯಾನೇಜರ್ ಒಬ್ಬರ ಸಮಯ ಪ್ರಜ್ಞೆಯಿಂದ ಹಣ ಉಳಿಸಿಕೊಂಡಿದ್ದಾರೆ.
ದಾಮಸ್ ಕಟ್ಟೆ ಕೊಲ್ಬೆಟ್ಟು ಎಂಬಲ್ಲಿನ ವೃದ್ಧ ದಂಪತಿ ಬೆನೆಡಿಕ್ಟ್ ಫೆರ್ನಾಂಡಿಸ್(84) ಹಾಗೂ ಅವರ ಪತ್ನಿ ಲಿಲ್ಲಿ ಫೆರ್ನಾಂಡಿಸ್(71)ರಿಗೆ ಸೋಮವಾರ ವಾಟ್ಸ್‌ಆ್ಯಪ್ ಮೂಲಕ ವೀಡಿಯೊ ಕರೆಯೊಂದು ಬಂದಿದೆ. ಕರೆ ಮಾಡಿದವರು ತಾವು ಉತ್ತರ ಪ್ರದೇಶದ ಸಿಐಡಿ ಪೊಲೀಸರು ಎಂದು ಹೇಳಿ ನಕಲಿ ದಾಖಲೆಗಳನ್ನು ತೋರಿಸಿ ಪರಿಚಯಿಸಿಕೊಂಡಿದ್ದಾರೆ. ನೀವು ಮುಂಬೈನ ಬ್ಯಾಂಕ್ ಖಾತೆಯಿಂದ ಆರು ಕೋಟಿ ರೂ. ಡ್ರಾ ಮಾಡಿ ವಂಚಿಸಿದ್ದೀರಿ. ನಿಮ್ಮ ವಿರುದ್ಧ ವಂಚನೆ ಕೇಸು ದಾಖಲಾಗಿದೆ. ಆ ಹಣವನ್ನು ಹಿಂದಿರುಗಿಸಬೇಕು. ಹಣ ನೀಡುವವರೆಗೆ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಡಿಜಿಟಲ್ ಅರೆಸ್ಟ್‌ನಿಂದ ತಪ್ಪಿಸಿಕೊಳ್ಳಲು ಯೋಚಿಸಬೇಡಿ. ಒಂದು ವೇಳೆ ಮನೆಯಿಂದ ಹೊರ ಬಂದರೆ ನಮ್ಮ ಸಿಬ್ಬಂದಿ ನಿಮ್ಮನ್ನು ಗುಂಡಿಕ್ಕಿ ಕೊಲ್ಲುತ್ತಾರೆ. ತಮ್ಮ ಖಾತೆಯಲ್ಲಿರುವ 84 ಲಕ್ಷ ರೂ.ನ್ನು ತಕ್ಷಣಕ್ಕೆ ವರ್ಗಾಯಿಸಬೇಕು ಎಂದು ಬೆದರಿಕೆ ಹಾಕಿದ್ದರು.
ಇದರಿಂದ ವಿಚಲಿತರಾದ ದಂಪತಿ ಬುಧವಾರ ಕಿನ್ನಿಗೋಳಿಯ ಕೆನರಾ ಬ್ಯಾಂಕ್‌ಗೆ ತೆರಳಿ ತಮ್ಮ ಎಫ್‌ಡಿ ಖಾತೆಯಲ್ಲಿರುವ 84 ಲಕ್ಷ ರೂ.ವನ್ನು ವಂಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಬ್ಯಾಂಕ್ ಮ್ಯಾನೇಜರ್‌ರನ್ನು ಕೋರಿದ್ದರು. ತಕ್ಷಣಕ್ಕೆ ಅಷ್ಟು ದೊಡ್ಡ ಮೊತ್ತ ಯಾಕೆ ವರ್ಗಾವಣೆ ಮಾಡುತ್ತೀರಿ ಎಂದು ಮ್ಯಾನೇಜರ್ ರಾಯಿಸ್ಟನ್ ವಿಚಾರಿಸಿದಾಗ, ಬೆಂಗಳೂರಿನಲ್ಲಿ ನಿವೇಶನ ಖರೀದಿಸಲೆಂದು ದಂಪತಿ ಸಬೂಬು ಹೇಳಿದ್ದರು. ಮತ್ತೆ ಮ್ಯಾನೇಜರ್ ದಂಪತಿಯನ್ನು ಪ್ರಶ್ನಿಸಿದಾಗ, ದಂಪತಿ ಸರಿಯಾದ ಉತ್ತರ ನೀಡಿರಲಿಲ್ಲ. ಇದರಿಂದ ಸಂಶಯಗೊಂಡ ಬ್ಯಾಂಕ್ ಮ್ಯಾನೇಜರ್ ವಂಚಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಿಲ್ಲ. ಅಲ್ಲದೇ, ಕಿನ್ನಿಗೋಳಿ ಪರಿಸರದ ಬೀಟ್ ಪೊಲೀಸ್ ಸಿಬ್ಬಂದಿ ಯಶವಂತ್ ಕುಮಾರ ಹಾಗೂ ಠಾಣಾ ಗುಪ್ತವಾರ್ತೆ ಸಿಬ್ಬಂದಿ ಕಿಶೋರ್‌ರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯ ಪ್ರವೃತ್ತರಾದ ಮುಲ್ಕಿ ಪೊಲೀಸರು ವೃದ್ಧ ದಂಪತಿಯ ಮನೆಗೆ ತೆರಳಿ ಅವರ ಮೊಬೈಲ್ ಪರಿಶೀಲಿಸಿದ್ದು ಈ ಸಮಯ ಅವರು ಡಿಜಿಟಲ್ ಅರೆಸ್ಟ್ ಒಳಗಾಗಿರುವುದು ಕಂಡುಬಂದಿದೆ. ಕೂಡಲೇ ಪೊಲೀಸ್ ಸಿಬ್ಬಂದಿಗಳು ಬ್ಯಾಂಕ್ ಮ್ಯಾನೇಜರ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದು ಹಣ ವರ್ಗಾವಣೆ ಮಾಡದಂತೆ ಸೂಚಿಸಿದ್ದರು. ಅಲ್ಲದೆ, ವೃದ್ದ ದಂಪತಿಗೆ ತಿಳುವಳಿಕೆ ನೀಡಿ, ದೊಡ್ಡ ಮೊತ್ತದ ಹಣವನ್ನು ಉಳಿಸಿರುತ್ತಾರೆ. ಇದರ ಬಗ್ಗೆ ಮುಲ್ಕಿ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಈ ಬಗ್ಗೆ ಮುಲ್ಕಿ ಠಾಣಾ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post