ಪುತ್ತೂರು, ಜ.6: ಪಿಯುಸಿ ಓದುತ್ತಿದ್ದ ಅಪ್ರಾಪ್ತ ಹುಡುಗಿ ಜೊತೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನನ್ನು ಹೊತ್ತೊಯ್ದು ಹಳೆ ಕಟ್ಟಡದಲ್ಲಿ ಕೂಡಿ ಹಾಕಿ ಹಲ್ಲೆಗೈದ ಘಟನೆ ಸುಬ್ರಹ್ಮಣ್ಯ ಬಳಿ ನಡೆದಿದೆ. 10ರಿಂದ 12 ಜನ ಯುವಕರು ಸೇರಿ ದೊಣ್ಣೆಯಿಂದ ಹಲ್ಲೆಗೈದಿದ್ದಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲ್ಲುಗುಂಡಿ ನಿವಾಸಿ ಅಫೀದ್(20) ಎಂಬ ಯುವಕನಿಗೆ ಪಿಯುಸಿ ಓದುತ್ತಿದ್ದ 17 ವರ್ಷದ ಯುವತಿ ಇನ್ಸ್ಟಾ ಗ್ರಾಮ್ ನಲ್ಲಿ ಕನೆಕ್ಟ್ ಆಗಿದ್ದು ಜ.5ರಂದು ಸಂಜೆ ಸುಬ್ರಹ್ಮಣ್ಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ನಿಂತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಯುವಕ ಹುಡುಗಿಗೆ ಚಾಕಲೇಟ್ ನೀಡುತ್ತಿದ್ದಾಗ ಮೂವರು ಅಪರಿಚಿತ ಯುವಕರು ಬಂದು ಅಫೀದ್ ನನ್ನು ಜೀಪಿನಲ್ಲಿ ಬಲವಂತದಿಂದ ಕರೆದೊಯ್ದಿದ್ದಾರೆ. ಬಳಿಕ ಕುಮಾರಧಾರಾ ಜಂಕ್ಷನ್ ಬಳಿಯ ಹಳೇ ಕಟ್ಟಡದಲ್ಲಿ ಯುವಕನನ್ನು ಕೂಡಿ ಹಾಕಿ 10ರಿಂದ 12 ಜನ ಸೇರಿ ಹಲ್ಲೆ ನಡೆಸಿದ್ದಾರೆ. ಆರೋಪಿತ ಯುವಕರು ಎಸ್ ಎಸ್ ಪಿಯು ಎಂದು ಬರೆದಿದ್ದ ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದರು. ಯಾವುದೋ ಸಂಘಟನೆ ಯುವಕರು ಸೇರಿ ನೈತಿಕ ಪೊಲೀಸ್ ಗಿರಿ ಕೃತ್ಯ ನಡೆಸಿದ್ದಾರೆಂಬ ಆರೋಪ ವ್ಯಕ್ತವಾಗಿದೆ. ಈ ವೇಳೆ, ಒಬ್ಬಾತ ಚೂರಿಯಿಂದ ತಿವಿಯಲು ಯತ್ನಿಸಿದ್ದು ಇನ್ನೊಬ್ಬಾತ ತಡೆದು ಮುಂದೆ ನಮ್ಮ ಹುಡುಗಿಯರ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾನೆಂದು ದೂರಲಾಗಿದೆ.
ಹಿಂದು ಹುಡುಗಿ ಅಪ್ರಾಪ್ತೆ ; ಈ ನಡುವೆ ಅಫೀದ್‌ನ ಜತೆ ಬಂದಿರುವ ಹುಡುಗಿ ಅಪ್ರಾಪ್ತ ವಯಸ್ಸಿನವಳೆಂದು ತಿಳಿದುಬಂದಿದೆ. ಅಫೀದ್ ಬಾಲಕಿಯನ್ನು ಪುಸಲಾಯಿಸಿ ಹೀಗೆ ಕರೆದುಕೊಂಡು ಬಂದಿದ್ದಾನೆ ಎಂದು ಆಕೆ ತಂದೆಯೂ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಯುವಕನ ವಿರುದ್ದ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿರುವ ಸುಬ್ರಹ್ಮಣ್ಯ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post