ಮಂಗಳೂರು, ಫೆ 07 : ನಗರದ ಹಂಪನ ಕಟ್ಟೆಯ ಜುವೆಲ್ಯರಿಯೊಂದರಲ್ಲಿ ಕಳೆದ ಶುಕ್ರವಾರ ಹಾಡುಹಗಲೇ ನಡೆದ ಸಿಬ್ಬಂದಿ ಕೊಲೆ, ಅಂಗಡಿ ದರೋಡೆ ಪ್ರಕರಣದ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಶಂಕಿತ ಆರೋಪಿಯ ಸಿಸಿ ಕೆಮರಾ ಚಿತ್ರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಜುವೆಲ್ಲರಿಂದ ಹೊರಗೆ ನಡೆದುಕೊಂಡು ಹೋಗುತ್ತಿರುವ ಯುವಕ ತಲೆಗೆ ಕಪ್ಪು ಟೋಪಿ, ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ. ಕಪ್ಪು ಜರ್ಕಿನ್ ತೊಟ್ಟಿದ್ದು ಜೀನ್ಸ್ ಪ್ಯಾಂಟ್ ಹಾಕಿದ್ದ. ಅಂದಾಜು 28ರ ಆಸುಪಾಸಿನ ಯುವಕನಂತಿದ್ದು, ಈತನ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಲು ಮನವಿ ಮಾಡಿದ್ದಾರೆ.
ಫೆ. 3ರಂದು ಮಧ್ಯಾಹ್ನ ಸುಮಾರು 3:30 ಗಂಟೆಯಿಂದ 3:45ರ ನಡುವೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠ ರಸ್ತೆಯಲ್ಲಿನ ಮಂಗಳೂರು ಜ್ಯುವೆಲ್ಲರ್ಸ್ ಗೆ ಈ ವ್ಯಕ್ತಿಯು ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿಯೊಳಗೆ ಇದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ ಎಂಬವರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುತ್ತಾನೆ. ಸ್ಥಳೀಯ ಸಿಸಿಟಿವಿಗಳಲ್ಲಿ ದಾಖಲಾದ ಚಿತ್ರಣಗಳಲ್ಲಿ ಈ ವ್ಯಕ್ತಿಯ ಚಿತ್ರವು ಪತ್ತೆಯಾಗಿದೆ ಪೊಲೀಸರು ತಿಳಿಸಿದ್ದಾರೆ.
ಜುವೆಲ್ಲರಿ ಅಂಗಡಿಯಿಂದ ಹೊರಬಂದಿದ್ದ ವ್ಯಕ್ತಿ ಅನತಿ ದೂರದ ವರೆಗೆ ಓಡಿ ಆನಂತರ ಆಟೋದಲ್ಲಿ ತೆರಳಿದ್ದ. ಹೀಗಾಗಿ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿ ಆನಂತರ ಎಲ್ಲಿ ಹೋಗಿದ್ದಾನೆ ಅನ್ನುವುದರ ಮಾಹಿತಿ ಇಲ್ಲ. ಇದೇ ವೇಳೆ, ಜುವೆಲ್ಲರಿಯಿಂದ 12 ಗ್ರಾಮ್ ತೂಕದ ಎರಡು ಸಣ್ಣ ಚಿನ್ನದ ಸರ ನಾಪತ್ತೆಯಾಗಿದ್ದು, ಅದನ್ನು ಆತ ಒಯ್ದಿರುವ ಶಂಕೆಯಿದೆ. ಆದರೆ ಸಣ್ಣ ಚಿನ್ನದ ಸರಕ್ಕಾಗಿ ಈ ಕೊಲೆ ಮಾಡಿದ್ದಿರಬಹುದೇ ಅನ್ನುವುದು ಅನುಮಾನಕ್ಕೆ ಕಾರಣವಾಗಿದೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಎಸಿಪಿ ಸಿಸಿಬಿ ಪಿ.ಎ. ಹೆಗಡೆ-9945054333, ಎಸಿಪಿ ಕೆಂದ್ರ ಉಪವಿಭಾಗದ ಮಹೇಶ್ ಕುಮಾರ್ –9480805320 ಅವರ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post